ADVERTISEMENT

ಮಲತಾಯಿ ಧೋರಣೆ ತೋರಬೇಡಿ: ಶಾಸಕ ಕೃಷ್ಣನಾಯ್ಕ ತಾಕೀತು

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ತಾಕೀತು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:18 IST
Last Updated 20 ಫೆಬ್ರುವರಿ 2026, 2:18 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೂವಿನಹಡಗಲಿ ಕ್ಷೇತ್ರದ ಶಾಸಕ ಕೃಷ್ಣನಾಯ್ಕ ಮಾತನಾಡಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೂವಿನಹಡಗಲಿ ಕ್ಷೇತ್ರದ ಶಾಸಕ ಕೃಷ್ಣನಾಯ್ಕ ಮಾತನಾಡಿದರು   

ಹಗರಿಬೊಮ್ಮನಹಳ್ಳಿ: ‘ತಾಲ್ಲೂಕಿನಲ್ಲಿರುವ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕು, ತಾಲ್ಲೂಕು ಮತ್ತು ವಿಧಾನಸಭಾ ಕ್ಷೇತ್ರ ಬೇರೆಯಾಗಿರುವುದರಿಂದ ಅಧಿಕಾರಿಗಳು ಮಲತಾಯಿ ಧೋರಣೆ ಮಾಡಬಾರದು’ ಎಂದು ಶಾಸಕ ಕೃಷ್ಣನಾಯ್ಕ ತಾಕೀತು ಮಾಡಿದರು.

ತಾಲ್ಲೂಕಿನ ಮೋರಿಗೇರಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹಂಪಸಾಗರ, ಬನ್ನಿಕಲ್ಲು, ಗದ್ದಿಕೇರಿ, ಮೋರಿಗೇರಿ, ಸೊನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬೀಳಬಾರದು, ಅಧಿಕಾರಿಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು’ ಎಂದರು.

ADVERTISEMENT

‘ಸಕ್ರಹಳ್ಳಿ, ನಾಗಲಾಪುರ, ಹಂಪಸಾಗರ ಮೂರನೇ ಕಾಲೊನಿಯನ್ನು ಕಂದಾಯ ಗ್ರಾಮಗಳಾಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗಿರಿಗೊಂಡನಹಳ್ಳಿ, ಗದ್ದಿಕೇರಿ ಹೊಸ ಕ್ಯಾಂಪ್, ಬನ್ನಿಕಲ್ಲು ನವಗ್ರಾಮ, ಎಂ.ಪಿ. ಪ್ರಕಾಶ್ ನಗರ, ಏಣಿಗಿ ಬಸಾಪುರ, ಜಿ.ಕೋಡಿಹಳ್ಳಿ ಹೊಸ ಕಾಲೊನಿ, ಸೊನ್ನ ಗ್ರಾಮದ ಕೆರೆ ಪ್ರದೇಶದಲ್ಲಿರುವ ಮನೆಗಳು ಸೇರಿದಂತೆ ವಿವಿಧ ಕಾಲೊನಿಗಳನ್ನು ಕಂದಾಯ ಗ್ರಾಮವಾಗಿಸಲು ಶೀಘ್ರ ಪ್ರಸ್ತಾವನೆ ಕಳಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ಯಾನುಭೋಗರ ಗುರುಸಿದ್ದಪ್ಪ ಮಾತನಾಡಿ, ‘ಮೋರಿಗೇರಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಬೀಜ–ಗೊಬ್ಬರ ವಿತರಣೆ ಕೇಂದ್ರ ಸ್ಥಾಪಿಸಬೇಕು. ಬನ್ನಿಕಲ್ಲು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಸರ್ಕಾರಿ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಬೇಕು. ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಬೇಕು’ ಎಂದು ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ದಿಡಗೂರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕೊಟ್ರೇಶ್‍ನಾಯ್ಕ ವಿದ್ಯಾರ್ಥಿ ನಿಲಯಗಳ ಕುಂದುಕೊರತೆಗಳ ಮಾಹಿತಿ ಪಡೆದರು. ಇಒ ಪಾಲಯ್ಯನಕೋಟೆ ವಿಶ್ವನಾಥ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ತಹಶೀಲ್ದಾರ್ ಆರ್.ಕವಿತಾ, ಬಿಇಒ ಎಂ.ಎಸ್. ಪ್ರಭಾಕರ, ಸಿಡಿಪಿಒ ಬೋರೆಗೌಡ ಇದ್ದರು.

ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳು ಸಮಗ್ರ ಅಭಿವೃದ್ಧಿಯಾಗಬೇಕು ಶಾಲಾ ಕಟ್ಟಡಗಳು ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಆಸ್ಪತ್ರೆ ಕಟ್ಟಡಗಳು ನಿರ್ಮಾಣಗೊಳ್ಳಬೇಕು ಇದಕ್ಕೆ ಅಗತ್ಯ ಇರುವ ನಿವೇಶನ ಮತ್ತು ಮಾಹಿತಿಯನ್ನು ಮಾರ್ಚ್ ಒಳಗೆ ಸಲ್ಲಿಸಬೇಕು
ಕೃಷ್ಣನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.