ADVERTISEMENT

ನಗರಸಭೆ ಚುನಾವಣೆ: ಕೊನೆ ದಿನ 173 ನಾಮಪತ್ರ ಸಲ್ಲಿಕೆ

ನಗರಸಭೆ ಚುನಾವಣೆಗೆ ರಂಗೇರಿಸಿದ ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 15:58 IST
Last Updated 15 ಡಿಸೆಂಬರ್ 2021, 15:58 IST

ಹೊಸಪೇಟೆ (ವಿಜಯನಗರ):ಹೊಸಪೇಟೆ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಒಟ್ಟು 173 ಜನ ಉಮೇದುವಾರಿಕೆ ಸಲ್ಲಿಸಿದರು.

ಬಿಜೆಪಿ 35 ವಾರ್ಡ್‌, ಕಾಂಗ್ರೆಸ್‌ 34, ಜೆಡಿಎಸ್‌ 7, ಎಸ್‌ಡಿಪಿಐ 6, ಕರ್ನಾಟಕ ರಾಷ್ಟ್ರ ಸಮಿತಿ 3, ಸಿಪಿಎಂ, ಆಮ್‌ ಆದ್ಮಿ ಪಕ್ಷ ತಲಾ 2, 149 ಜನ ಪಕ್ಷೇತರರು ನಾಮಪತ್ರ ಸಲ್ಲಿಸಿದರು. ಇದುವರೆಗೆ ಒಟ್ಟು 239 ನಾಮಪತ್ರ ಸಲ್ಲಿಕೆಯಾಗಿದ್ದು, ಗುರುವಾರ (ಡಿ.16) ಅವುಗಳ ಪರಿಶೀಲನೆ ನಡೆಯಲಿದೆ.

ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿ ನಗರಸಭೆ ಚುನಾವಣೆಗೆ ರಂಗೇರಿಸಿದರು.

ADVERTISEMENT

ಡಿ. 8ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿತ್ತು. ಆರಂಭದಿಂದ ಅಲ್ಲೊಬ್ಬರು ಇಲ್ಲೊಬ್ಬರು ನಾಮಪತ್ರ ಸಲ್ಲಿಸುತ್ತ ಬಂದಿದ್ದರು. ಈ ಹಿಂದಿನ ಎರಡು ದಿನ 20ಕ್ಕೂ ಅಧಿಕ ಜನ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರಲಿಲ್ಲ. ಆದರೆ, ಬುಧವಾರ ಕೊನೆಯ ದಿನ ಎಲ್ಲರೂ ಒಟ್ಟಿಗೆ ಉಮೇದುವಾರಿಕೆ ಸಲ್ಲಿಸಿದ್ದರಿಂದ ನಗರದಲ್ಲಿ ಚುನಾವಣೆಯ ರಂಗೇರಿತ್ತು.

ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಆಯಾ ವಾರ್ಡ್‌ಗಳಿಂದ ಚುನಾವಣಾಧಿಕಾರಿಗಳ ಕಚೇರಿಗೆ ಅವರ ಬೆಂಬಲಿಗರ ದಂಡಿನೊಂದಿಗೆ ತೆರಳಿದರು. ತಮಟೆ, ಬ್ಯಾಂಡ್‌ ಬಾಜಾ, ಪಕ್ಷದ ಧ್ವಜಗಳೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಆಯಾ ಪಕ್ಷಗಳ ಮುಖಂಡರು ಅವರೊಂದಿಗೆ ಹೆಜ್ಜೆ ಹಾಕಿ ಬೆಂಬಲ ಸೂಚಿಸಿದರು. ಸಚಿವ ಆನಂದ್‌ ಸಿಂಗ್‌ ಅವರು ಅಭ್ಯರ್ಥಿಗಳನ್ನು ಭೇಟಿಯಾಗಿ ಶುಭ ಕೋರಿದರು.

ಖಾರದಪುಡಿ ಮಹೇಶಗೆ ಟಿಕೆಟ್‌, ಟೀಕೆ:

20ನೇ ವಾರ್ಡ್‌ನಿಂದ ಕಾಂಗ್ರೆಸ್‌ ಪಕ್ಷವು ಖಾರದಪುಡಿ ಮಹೇಶ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

‘ಅಕ್ರಮ ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸಂಡೂರು ಭೇಟಿ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಮಹೇಶ ಸೇರಿದಂತೆ ಹಲವರು ಅವರು ತೆರಳುವ ಮಾರ್ಗದಲ್ಲಿ ಕಂದಕ ನಿರ್ಮಿಸಿ ಅಡ್ಡಿಪಡಿಸಿದ್ದರು. ಅಂತಹವರಿಗೆ ಪಕ್ಷದ ಟಿಕೆಟ್‌ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ. ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬರುವುದಿಲ್ಲವೇ?’ ಎಂದು ಹೆಸರು ಹೇಳಲಿಚ್ಛಿಸದ ಆ ಪಕ್ಷದ ಕಾರ್ಯಕರ್ತರೇ ಪ್ರಶ್ನಿಸಿದ್ದಾರೆ. ‘ಇದು ಪಕ್ಷದ ನಿರ್ಧಾರ’ ಎಂದು ಸ್ಥಳೀಯ ಮುಖಂಡರು ಜಾರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.