ಹೊಸಪೇಟೆ (ವಿಜಯನಗರ): ಹುತಾತ್ಮ ಯೋಧರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಜಮೀನು ಪರಿಹಾರವನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದ ಪ್ರಕರಣವನ್ನು ಲೋಕಾಯುಕ್ತ ಗಂಭೀರವಾಗಿ ತೆಗೆದುಕೊಂಡಿದ್ದು, ಜಿಲ್ಲೆಯ ಎಲ್ಲಾ ಆರು ಮಂದಿ ತಹಶೀಲ್ದಾರ್‌ಗಳಿಗೆ ಹಾಗೂ ಇಬ್ಬರು ಉಪವಿಭಾಗಾಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಿದೆ.
‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ವಿವಿಧ ಇಲಾಖೆಗಳಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಲೋಕಾಯುಕ್ತ ಕಾಯ್ದೆಯಡಿ ದುರಾಡಳಿತ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಸೆ.23ರಂದು ಕಚೇರಿಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಲು ಸೂಚನೆ ನೀಡಲಾಗಿದೆ’ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಕಚೇರಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ನಿವೃತ್ತರಾದ ಯೋಧರಿಗೆ, ಹುತಾತ್ಮ ಯೋಧರ ಅವಲಂಬಿತರಿಗೆ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಮತ್ತು ನಿವೇಶನವನ್ನು ನೀಡಬೇಕೆಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಎರಡು ಪ್ರಕರಣಗಳು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಹಾಗೂ ತುಮಕೂರು ಜಿಲ್ಲೆ ಕ್ಯಾತಸಂದ್ರದ ಸಿ.ಎಂ.ಬಡಾವಣೆಗಳಲ್ಲಿ ಕಂಡುಬಂದಿತ್ತು. ಅದರಂತೆ ವಿಜಯನಗರ ಜಿಲ್ಲೆಯಲ್ಲೂ ಹಲವು ಪ್ರಕರಣಗಳು ಇರುವ ಕಾರಣ ಸುಮೊಟೊ ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.
ಅರಣ್ಯರೋದನವಾಗಿತ್ತು: ‘ನಮ್ಮ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಮಂದಿ ವಿವಿಧ ಸೇನಾ ಕಾರ್ಯಾಚರಣೆಗಳು, ಯುದ್ಧಗಳಲ್ಲಿ ಹಾಗೂ ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಅದೆಷ್ಟೋ ಮಂದಿಗೆ ಸರ್ಕಾರ ನೀಡಲೇಬೇಕಾದ ನಿವೇಶನ ಸಿಕ್ಕಿಯೇ ಇಲ್ಲ. ನಾವು ಇದರ ಬಗ್ಗೆ ನಿರಂತರ ಹೋರಾಟ ನಡೆಸಿದ್ದರೂ ಅದೆಲ್ಲವೂ ಅರಣ್ಯರೋದನವಾಗಿತ್ತು’ ಎಂದು ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
‘ಹೊಸ ಜಿಲ್ಲೆ ಸ್ಥಾಪನೆಗೊಂಡು ನಾಲ್ಕು ವರ್ಷವಾಯಿತು, ಒಂದು ಹುತಾತ್ಮ ಸ್ಮಾರಕ ನಿರ್ಮಿಸಿ ಎಂಬ ನಮ್ಮ ಬೇಡಿಕೆ ಇದುವರೆಗೂ ಈಡೇರಿಲ್ಲ. ಇದು ವೈಯಕ್ತಿಕ ವಿಚಾರ ಅಲ್ಲ, ಹೀಗಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ, ಇನ್ನು ವೈಯಕ್ತಿಕ ವಿಚಾರಗಳಲ್ಲಿ ಬಹಳಷ್ಟು ಗೋಳಾಡಿಸಿದ ನಿದರ್ಶನಗಳು ನನ್ನ ಬಳಿ ಸಾಕಷ್ಟಿದೆ. ಲೋಕಾಯುಕ್ತ ಕೊನೆಗೂ ಎಚ್ಚೆತ್ತುಕೊಂಡಿರುವುದು ಒಂದಿಷ್ಟು ಸಮಾಧಾನ ತಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.