ADVERTISEMENT

ಪೊಲೀಸರಂತೆ ನಟಿಸಿ ಆಭರಣ ಲೂಟಿ: 24 ತಾಸಿನೊಳಗೆ ಮೂವರ ಬಂಧನ

ಖಾಸಗಿ ಬಸ್‌ನ ಚಾಲಕ, ನಿರ್ವಾಹಕ ಭಾಗಿಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 9:55 IST
Last Updated 19 ಮಾರ್ಚ್ 2025, 9:55 IST
   

ಹೊಸಪೇಟೆ (ವಿಜಯನಗರ): ಖಾಸಗಿ ಬಸ್‌ನಲ್ಲಿ ದಾವಣಗೆರೆಯಿಂದ ವಿಜಯಪುರಕ್ಕೆ ಬಂಗಾರದ ಆಭರಣಗಳನ್ನು ಪಾರ್ಸೆಲ್‌ ಮಾಡಿದ್ದನ್ನು ಪೊಲೀಸರ ಸೋಗಿನಲ್ಲಿ ಲಪಟಾಯಿಸಲು ಸಂಜು ರೂಪಿಸಿದ್ದ ಮೂವರನ್ನು ಹರಪನಹಳ್ಳಿ ಪೊಲೀಸರು ಬಂಧಿಸಿದ್ದು, ₹61.25 ಲಕ್ಷ ಮೌಲ್ಯದ 806 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಅವರು ಬುಧವಾರ ಇಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮಾರ್ಚ್‌ 16ರಂದು ಮಧ್ಯರಾತ್ರಿ ಈ ಲೂಟಿ ಯತ್ನ ನಡೆದಿತ್ತು, ಮರುದಿನ ಬೆಳಿಗ್ಗೆ ಬಂಗಾರದ ಆಭರಣ ಪಾರ್ಸೆಲ್‌ ಮಾಡಿದ ನಾಲ್ವರ ಪೈಕಿ ಒಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ಮೂಲಕ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ದುರ್ಗಾಂಬಾ ಬಸ್ ಶಿವಮೊಗ್ಗದಿಂದ ವಿಜಯಪುರಕ್ಕೆ ನಿತ್ಯ ಸಂಚರಿಸುವ ಬಸ್ಸಾಗಿದ್ದು, ಅದರಲ್ಲಿ ಈ ಕೃತ್ಯ ನಡೆದಿದೆ. ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರಿನ ಬಸ್‌ ಚಾಲಕ ಮಂಜುನಾಥ (39), ಬಸ್‌ನ ನಿರ್ವಾಹಕ ಹಾವೇರಿ ಜಿಲ್ಲೆ ಗುತ್ತಲ ತಾಂಡಾದ ಕೃಷ್ಣ ಲಕ್ಕಪ್ಪ ಲಮಾಣಿ (26) ಹಾಗೂ ಪೊಲೀಸರಂತೆ ನಟಿಸಿದ್ದ ಚನ್ನಗಿರಿ ತಾಲ್ಲೂಕು ಕೆರೆಕಟ್ಟೆ ಗ್ರಾಮದ ನಿತ್ಯಾನಂದ (33) ಬಂಧಿತರು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಆರೋಪಿಗಳಿಂದ ಮೂರು ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಇದೊಂದು ಸ್ಪಷ್ಟವಾದ ನಂಬಿಕೆ ದ್ರೋಹ/ ವಂಚನೆ ಪ್ರಕರಣವಾಗಿದೆ ಎಂದರು.

ಘಟನೆಯ ವಿವರ: ‘ವಿಜಯಪುರ ಭಾಗದಲ್ಲಿ ಚಿನ್ನದ ವಿನ್ಯಾಸ ಮಾಢುವ ಕುಶಲಕರ್ಮಿಗಳ ಸಂಖ್ಯೆ ಕಡಿಮೆ ಇದ್ದು, ಈ ಖಾಸಗಿ ಬಸ್‌ನಲ್ಲಿ ಚಿನ್ನದ ಪಾರ್ಸೆಲ್‌ ಕಳುಹಿಸಿ, ದಾವಣಗೆರೆ ತಲುಪಿಸಿ, ವಿನ್ಯಾಸ ಮಾಡಲಾದ ಚಿನ್ನದ ಪಾರ್ಸೆಲ್‌ ಅನ್ನು ಮತ್ತೆ ವಿಜಯಪುರಕ್ಕೆ ತಲುಪಿಸುವ ಕೆಲಸವನ್ನು ಈ ಬಸ್‌ನವರು ಹಲವು ವರ್ಷಗಳಿಂದ ಮಾಡುತ್ತ ಬರುತ್ತಿದ್ದಾರೆ. ಇದೊಂದು ವಿಶ್ವಾಸದ ವ್ಯವಹಾರವಾಗಿತ್ತು. ಆದರೆ ಈ ಬಾರಿ ಒಮ್ಮೆಗೇ ಶ್ರೀಮಂತರಾಗುವ ದುರಾಲೋಚನೆಯಿಂದ ಬಸ್‌ನ ಚಾಲಕ, ನಿರ್ವಾಹಕರು ಈ ಹಿಂದೆ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕಿದ್ದ ನಿತ್ಯಾನಂದನೊಂದಿಗೆ ಸೇರಿಕೊಂಡು ಈ ವಂಚನೆ ಕೃತ್ಯಕ್ಕೆ ಇಳಿದಿದ್ದರು’ ಎಂದು ಎಸ್‌ಪಿ ಶ್ರೀಹರಿಬಾಬು ಮಾಹಿತಿ ನೀಡಿದರು.

‘ಮಾರ್ಚ್‌ 16ರಂದು ಮಧ್ಯರಾತ್ರಿ ದಾವಣಗೆರೆಯಲ್ಲಿ ಬಸ್‌ನ ಕಂಡಕ್ಟರ್ ಬಳಿ ನಾಲ್ವರು ಪ್ರತ್ಯೇಕ ಪಾರ್ಸೆಲ್ ನೀಡಿದ್ದರು. 12.30ರ ಸುಮಾರಿಗೆ ಬಸ್‌ ಹರಪನಹಳ್ಳಿ ತಾಲ್ಲೂಕು ತೆಲಗಿಗೆ ಬರುತ್ತಿದ್ದಂತೆಯೇ ಬಸ್‌ನ ಕಂಡಕ್ಟರ್‌ ಪಾರ್ಸೆಲ್‌ ನೀಡಿದ್ದ ನಾಲ್ವರಲ್ಲಿ ಒಬ್ಬರಾದ ಕುಮಾರ್ ಎಂಬುವವರಿಗೆ ಫೋನ್ ಕರೆ ಮಾಡಿ, ಇಬ್ಬರು ಪೊಲೀಸರು ಬಸ್ಸನ್ನು ನಿಲ್ಲಿಸಿ ನಮ್ಮಿಂದ ಪಾರ್ಸೆಲ್‌ ಕಿತ್ತುಕೊಂಡಿದ್ದಾರೆ, ಅವರು ದಾವಣಗೆರೆ ಕ್ರೈಂ ಬ್ರಾಂಚಿನವರು ಎಂದು ಹೇಳಿದ್ದು, ನನ್ನನ್ನೂ ಜತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದೀರಿ ಎಂದು ದೂರಿ ಅವರು ಪಾರ್ಸೆಲ್ ವಶಕ್ಕೆ ಪಡೆದಿದ್ದಾರೆ. ನೀವು ನಾಳೆ ಠಾಣೆಗೆ ಬಂದು, ದಾಖಲೆ ನೀಡಿ ಆಭರಣ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ ಎಂದು ಹೇಳಿದ್ದ. ಈ ಕರೆಯ ಬಗ್ಗೆ ಅನುಮಾನಗೊಂಡ ಕುಮಾರ್ 17ರಂದು ಹರಪನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅದರಂತೆ ಮೊದಲಿಗೆ ವಿಜಯಪುರದಲ್ಲಿದ್ದ ಚಾಲಕನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ವಂಚನೆಯ ಜಾಲ ಭೇದಿಸುವುದು ಸಾಧ್ಯವಾಯಿತು’ ಎಂದು ಎಸ್‌ಪಿ ಮಾಹಿತಿ ನೀಡಿದರು.

ಪತ್ತೆ ಕಾರ್ಯಾಚರಣೆಯಲ್ಲಿ ಎಸ್‌ಪಿ ಹಾಗೂ ಎಎಸ್‌ಪಿ ಸಲೀಂ ಪಾಷಾ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ.ಕಮ್ಮಾರ, ಹೂವಿನಹಡಗಲಿ ಸಿಪಿಐ ದಿಪಕ್‌ ಬೂಸರೆಡ್ಡಿ, ಹರಪನಹಳ್ಳಿ ಪಿಎಸ್‌ಐ ಶಂಭುಲಿಂಗ ಹಿರೇಮಠ, ಹಲುವಾಗಲು ಪಿಎಸ್‌ಐ ಕಿರಣ್‌ ಕುಮಾರ್‌, ಅರಸೀಕೆರೆ ಪಿಎಸ್‌ಐ ರಂಗಯ್ಯ, ಹಿರೇಹಡಗಲಿ ಪಿಎಸ್‌ಐ ಭರತ್‌ ಪ್ರಕಾಶ್, ಹೂವಿನಹಡಗಲಿ ಪಿಎಸ್‌ಐ ವಿಜಯಕೃಷ್ಣ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್‌ ವಿಭಾಗದ ಕುಮಾರ್ ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.