ADVERTISEMENT

ಹರಪನಹಳ್ಳಿ | ಪ್ರೇಮಿಗಳ ಸಾವು: ಪ್ರತ್ಯೇಕ ದೂರು

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣ: ಕೊಲೆ ಸಂಶಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:53 IST
Last Updated 22 ಏಪ್ರಿಲ್ 2025, 15:53 IST
ಮದ್ದಾನಸ್ವಾಮಿ ಮತ್ತು ದೀಪಿಕಾ
ಮದ್ದಾನಸ್ವಾಮಿ ಮತ್ತು ದೀಪಿಕಾ   

ಹರಪನಹಳ್ಳಿ: ತಾಲ್ಲೂಕಿನ ಅನಂತನಹಳ್ಳಿ ಬಳಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿರುವ ಪ್ರೇಮಿಗಳ ಕೊಳೆತ ಶವಗಳ ವಾರಸುದಾರರು, ತಮ್ಮ ಮಕ್ಕಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

ಮೃತ ಮದ್ದಾನಸ್ವಾಮಿ (18) ಮಾದಿಗ ಜನಾಂಗಕ್ಕೆ ಸೇರಿದವ ಹಾಗೂ ದೀಪಿಕಾ (18) ಕುರುಬ ಜನಾಂಗಕ್ಕೆ ಸೇರಿದ್ದಾರೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮೇಲ್ನೋಟಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವಗಳಿಂದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಗಿದ್ದು, ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮದ್ದಾನಸ್ವಾಮಿಯು ಏ.15ರಂದು ಹರಪನಹಳ್ಳಿಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ವಾಪಾಸು ಮನೆಗೆ ಬಂದಿರಲಿಲ್ಲ. ಮೃತ ದೀಪಿಕಾ ಕಡೆಯ 5 ಜನ ಮದ್ದಾನಸ್ವಾಮಿ ಮನೆಯ ಹತ್ತಿರ ಬಂದು ನಿಮ್ಮ ಹುಡುಗನು ನಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ, ಅವನು ಎಲ್ಲಿದ್ದಾನೆ ಅಂತಾ ಜೋರು ಗಲಾಟೆ ಮಾಡಿ, ಹಿರಿಯ ಮಗ ಮಾರುತಿಯ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಎರಡು ದಿನಗಳ ಬಳಿಕ ಪುನಃ ಮೊಬೈಲ್ ಕಳಿಸಿಕೊಟ್ಟಿದ್ದರು. ಹಾಗಾಗಿ ನನ್ನ ಮಗನ ಸಾವಿನಲ್ಲಿ ಸಂಶಯವಿದ್ದು, ತನಿಖೆ ನಡೆಸಬೇಕು’ ಎಂದು ತಂದೆ ಕೆಂಚಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಏ.15ರಂದು ನನ್ನ ಮಗಳು ಹರಪನಹಳ್ಳಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮನೆಗೆ ಬಂದಿರಲಿಲ್ಲ. ಈ ಸಂಬಂಧ ಏ.17ರಂದು ಹರಪನಹಳ್ಳಿ ಠಾಣೆಯಲ್ಲಿ ಕಾಣೆ ದೂರು ಸಲ್ಲಿಸಿದ್ದೆ. ಮೃತ ಮದ್ದಾನಸ್ವಾಮಿ ನನ್ನ ಮಗಳನ್ನು ಪ್ರೀತಿ ಮಾಡುತ್ತೇನೆಂದು ಪುಸಲಾಯಿಸಿಕೊಂಡು ಅದೇ ದಿನ ಕರೆದುಕೊಂಡು ಹೋಗಿದ್ದಾನೆ. ಮನೆಯವರು ನಮ್ಮ ಪ್ರೀತಿ ಒಪ್ಪುವುದಿಲ್ಲ ಎಂದು ಭಾವಿಸಿ ಮನೆ ಬಿಟ್ಟು ಹೋಗಿದ್ದಳು. ಆಕೆಯ ಶವದ ಜೊತೆಗೆ ಜಿತ್ತಿನಕಟ್ಟಿ ಗ್ರಾಮದ ಮದ್ದಾನಸ್ವಾಮಿ ಶವವು ಇರುವ ಕಾರಣ ನನ್ನ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತ ದೀಪಿಕಾ ಪಾಲಕರು ದೂರಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಎರಡೂ ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿವೆ.

ಪ್ರೇಮಿಗಳ ಸಾವು ಮರ್ಯಾದೆಗೇಡು ಹತ್ಯೆಯೇ ಅಥವಾ ನಿರ್ಜನ ಪ್ರದೇಶಕ್ಕೆ ಹೋಗಿದ್ದ ಪ್ರೇಮಿಗಳನ್ನು ಯಾರಾದರೂ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಯೇ ಎಂಬ ವದಂತಿ ದಟ್ಟವಾಗಿದೆ. ಪ್ರಯೋಗಾಲಯದಿಂದ ಬರುವ ವರದಿಯತ್ತ ಕುತೂಹಲ ನೆಟ್ಟಿದೆ.

ಮದ್ದಾನಸ್ವಾಮಿ ಮತ್ತು ದೀಪಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.