ADVERTISEMENT

ವಿಜಯನಗರ | ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ

ಒಳಮೀಸಲಾತಿ ವಿಳಂಬ: ಸರ್ಕಾರದ ವಿರುದ್ಧ ಮಾದಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:57 IST
Last Updated 2 ಆಗಸ್ಟ್ 2025, 5:57 IST
ಒಳಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹೊಸಪೇಟೆಯಲ್ಲಿ  ಅರೆಬೆತ್ತಲೆ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ
ಒಳಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹೊಸಪೇಟೆಯಲ್ಲಿ  ಅರೆಬೆತ್ತಲೆ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿ ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ ನಡೆಯಿತು.

ಒಳಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ಪ್ರಕಟಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಗರದ ಸಾಯಿಬಾಬಾ ವೃತ್ತದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಕೆಲವರು ಶರ್ಟ್‌, ಇನ್ನೂ ಕೆಲವರು ಬರಿಮೈಯಲ್ಲೇ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಪ್ರತಿಭಟನೆ ನಡೆಸಿದರು. 

ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಎಂ.ಸಿ.ವೀರಸ್ವಾಮಿ ಹಾಗೂ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಮುಖಂಡರ ನೇತೃತ್ವದಲ್ಲಿ ನಡೆದ ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಯಿತು.

ADVERTISEMENT

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಲ್ಲಾಹುಣ್ಸಿ ರಾಮಣ್ಣ, ಹೋರಾಟ ತೀವ್ರಗೊಳಿಸಿದ್ದರ ಹಿನ್ನೆಲೆ ತಿಳಿಸಿ, ಸರ್ಕಾರದ ವಿಳಂಬ ನೀತಿಯನ್ನು ಇನ್ನಷ್ಟು ಸಹಿಸಲು ಸಾಧ್ಯವಿಲ್ಲ ಎಂದರು. ತಕ್ಷಣ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಪಿ.ಉಮಾಪತಿ, ತಗ್ಗಿನಕೇರಿ ಕೊಟ್ರೇಶ್‌, ಮಲ್ಲಿಕಾರ್ಜುನ ಕೊಟಗಿನಾಳ, ಪೂಜಪ್ಪ, ಕೊಟ್ಟೂರು ಮರಿಸ್ವಾಮಿ, ಕಣಿವೆಹಳ್ಳಿ ಮಂಜುನಾಥ, ಎಸ್.ದುರ್ಗೇಶ್‌, ವಿಶಾಲಾಕ್ಷಿ ಇತರರು ಮಾತನಾಡಿದರು. ಸಿ.ಆರ್.ಭರತ್‌ಕುಮಾರ್, ಶೇಷು, ಸಣ್ಣ ಮಾರೆಪ್ಪ, ಬಸವರಾಜ್‌, ಲಕ್ಷ್ಮಣ  ಕಾರಿಗನೂರು ಭಾಗವಹಿಸಿದ್ದರು.

ಕೊನೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.

ಒಳಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹೊಸಪೇಟೆಯಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಯಿತು  –ಪ್ರಜಾವಾಣಿ ಚಿತ್ರ

ಸುಪ್ರೀಂ ಕೋರ್ಟ್ ತೀರ್ಪು ಬಂದು 1 ವರ್ಷ ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ಮುಂದೆ ತಕ್ಕ ಪಾಠ ಕಲಿಸುವ ಎಚ್ಚರಿಕೆ

ಕುತ್ತಿಗೆ ಕೊಯ್ದುಕೊಳ್ಳಲು ಯತ್ನ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಮೆರವಣಿಗೆ ಬರುತ್ತಿದ್ದಂತೆ ಕೆಲವರನ್ನಷ್ಟೇ ಒಳಗೆ ಬಿಟ್ಟು ಉಳಿದವರನ್ನು ಹೊಗಡೆಯೇ ತಡೆಯುವ ಯತ್ನ ನಡೆಯಿತು. ಆಗ ಪ್ರತಿಭಟನಾ ನಿರತರೊಬ್ಬರು ರೇಜರ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಳ್ಳಲು ಮುಂದಾದರು. ಪೊಲೀಸರು ಅವರ ಯತ್ನವನ್ನು ವಿಫಲಗೊಳಿಸಿ ಬಳಿಕ ಎಲ್ಲರನ್ನೂ ಡಿಸಿ  ಕಚೇರಿ ಆವರಣದೊಳಕ್ಕೆ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.