ADVERTISEMENT

ಮಾಲವಿ ಜಲಾಶಯ | ಕ್ರೆಸ್ಟ್‌ಗೇಟ್‌ ಬಹುತೇಕ ಸಿದ್ಧ: ಆರು ತಿಂಗಳಲ್ಲಿ ಮುಗಿದ ಕಾಮಗಾರಿ

ಸಿ.ಶಿವಾನಂದ
Published 25 ಡಿಸೆಂಬರ್ 2025, 2:42 IST
Last Updated 25 ಡಿಸೆಂಬರ್ 2025, 2:42 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ ಹೊಸದಾಗಿ 8 ಕ್ರೆಸ್ಟ್‌ಗೇಟ್‍ಗಳನ್ನು ದುರಸ್ತಿಗೊಳಿಸಿ ಅಳವಡಿಸಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ ಹೊಸದಾಗಿ 8 ಕ್ರೆಸ್ಟ್‌ಗೇಟ್‍ಗಳನ್ನು ದುರಸ್ತಿಗೊಳಿಸಿ ಅಳವಡಿಸಿರುವುದು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯದ ಕ್ರೆಸ್ಟ್‌ಗೇಟ್‌ಗಳನ್ನು ನವೀಕರಣಗೊಳಿಸಿ ದುರಸ್ತಿಗಳಿಸುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಬರುವ ಮುಂಗಾರಿನಲ್ಲಿ ಜಲಾಶಯದಲ್ಲಿ ನೀರು ಸಂಗ್ರಹಗೊಂಡು ಅಚ್ಚುಕಟ್ಟು ಪ್ರದೇಶದ ರೈತರ ಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.

ಮೂರು ತಿಂಗಳಲ್ಲಿ ದುರಸ್ತಿ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದರೂ, ಆರು ತಿಂಗಳಲ್ಲಿ ಅದು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಹೀಗಾಗಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ಈ ಬಾರಿ ವ್ಯರ್ಥವಾಗಿ ಹೋಗಿದೆ. 1 ಟಿಎಂಸಿ ಅಡಿಗೂ ಅಧಿಕ ನೀರು ಹಗರಿ ಹಳ್ಳದ  ಮೂಲಕ ತುಂಗಭದ್ರಾ ನದಿ ಸೇರಿದೆ.

₹4 ಕೋಟಿ ಅಂದಾಜು ಮೊತ್ತದಲ್ಲಿ 10 ಕ್ರೆಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯ ಈಗ ವೇಗ ಪಡೆದುಕೊಂಡಿದ್ದು, 8 ಕ್ರೆಸ್ಟ್‌ಗೇಟ್‌ಗಳನ್ನು ದುರಸ್ತಿಗೊಳಿಸಿ ಆಣೆಕಟ್ಟೆಗೆ ಅಳವಡಿಸಲಾಗಿದೆ, ಮೂರು ತಿಂಗಳಲ್ಲಿ ಕೇವಲ ಮೂರು ಮಾತ್ರ ಅಳವಡಿಸಿದ್ದರು, ಬಳಿಕ ಐದು ಗೇಟ್‍ಗಳನ್ನು ಎರಡು ತಿಂಗಳಲ್ಲಿಯೇ ಅಳವಡಿಸಿದ್ದಾರೆ. ಉಳಿದೆರಡು ಗೇಟ್‍ಗಳನ್ನು 15 ದಿನಗಳಲ್ಲಿ ಅಳವಡಿಸಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ ಬೃಹತ್ ನೀರಾವರಿ ಇಲಾಖೆಯ ಎಂಜನಿಯರ್‌ಗಳು.

ADVERTISEMENT

ಜಲಾಶಯದ ಕ್ರೆಸ್ಟ್‌ಗೇಟ್‌ಗಳು ದುರಸ್ತಿಗೊಂಡಿರುವುದರಿಂದ ₹150 ಕೋಟಿ ಮೊತ್ತದ ಅನುದಾನದಿಂದ ತುಂಗಭದ್ರೆಯಿಂದ ಜಲಾಶಯಯಕ್ಕೆ ನೀರು ಹರಿಸುವ ಕಾಮಗಾರಿಯ ಮೂಲ ಉದ್ಧೇಶವೂ ಈಡೇರುತ್ತದೆ, 13 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ನೇರವಾಗಿ ನೀರುಣಿಸಬಹುದಾಗಿದೆ, ಸಾವಿರಾರು ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗುತ್ತದೆ. ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದಲ್ಲಿ ಮತ್ತು ತುಂಗಭದ್ರೆಯಿಂದ ನೀರು ಹರಿದಲ್ಲಿ ನಿರ್ಮಾಣಗೊಂಡ ಜಲಾಶಯದ ಮೂಲ ಉದ್ಧೇಶ ಈಡೇರಿದಂತಾಗುತ್ತದೆ ಎನ್ನುತ್ತಾರೆ ರೈತರು. ಈ ಜಲಾಶಯ 2 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

ಕ್ರೆಸ್ಟ್‌ಗೇಟ್‌ಗಳ ದುರಸ್ತಿ ವಿಳಂಬವಾಗಿದ್ದರಿಂದ ನೀರು ಸಂಗ್ರಹ ಕಡಿಮೆ ಆಗಿದೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ನೀರಿಲ್ಲ. ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಹುದು
ಚನ್ನಬಸಪ್ಪ ಮಾಲವಿ ರೈತ
ಕಾಮಗಾರಿಯ ಆರಂಭದಲ್ಲಿ ಅಹಮದಾಬಾದ್‍ನಿಂದ ಕ್ರೆಸ್ಟ್‌ಗೇಟ್‌ಗಳಿಗೆ ಅಳವಡಿಸುವ ರೋಲರ್ಸ್ ಬರುವುದು ವಿಳಂಬವಾಗಿದ್ದರಿಂದ ಕಾಮಗಾರಿ ಮುಗಿಯುವುದು ತಡವಾಗಿದೆ. ಆಧುನಿಕ ತಂತ್ರಜ್ಞಾನದಿಂದ ಗೇಟ್‌ ನಿರ್ವಹಣೆ ಮಾಡಬಹುದಾಗಿದೆ
ಹುಲಿರಾಜ ಜೂನಿಯರ್ ಎಂಜಿನಿಯರ್ ಬೃಹತ್ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.