
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವಿದೇಶಿ ಡೆಮೊಸೆಲ್ ಕ್ರೇನ್ ಪಕ್ಷಿಗಳು (ಕ್ರೌಂಚ ಪಕ್ಷಿ) ‘ಸಮಾವೇಶ’ ನಡೆದಿದೆ. ಆಹಾರ ಅರಸಿ ಅಂದಾಜು ಎರಡು ಸಾವಿರ ಪಕ್ಷಿಗಳು ವಲಸೆ ಬಂದಿವೆ. ದಕ್ಷಿಣ ಭಾರತದಲ್ಲೇ ಮೊದಲಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಸೇರಿವೆ.
ಜಲಾಶಯದ ಜೌಗು ಪ್ರದೇಶ ಸದ್ಯ ಒಣಗುತ್ತಿದ್ದು, ಈ ಬಾನಾಡಿಗಳಿಗೆ ಆಹಾರದ ಬಟ್ಟಲಾಗಿ ಬದಲಾಗಿದೆ. ಕೃಷಿ ಭೂಮಿ, ಕೆರೆಕಟ್ಟೆಗಳ ಬಳಿಯೇ ಅವು ಹೆಚ್ಚು ಠಿಕಾಣಿ ಹೂಡುತ್ತವೆ.
ಆದರೆ, ನೀರಿನ ಗುಂಡಿಗಳ ಬಳಿ ಮೀನುಗಾರರು ಬಲೆ ಹಾಕಿರುವುದು ಮತ್ತು ಬೀದಿ ನಾಯಿಗಳ ಹಾವಳಿಯ ಕಾರಣದಿಂದ ಈ ಅಪರೂಪದ ಪಕ್ಷಿಗಳಿಗೆ ಅಪಾಯ ಎದುರಾಗಿದೆ.
‘ಮಂಗೋಲಿಯಾ ಮತ್ತು ಸೈಬೇರಿಯಾದಿಂದ ಹಿಮಾಲಯ ದಾಟಿ ಈ ಕ್ರೌಂಚ ಪಕ್ಷಿಗಳು ವಲಸೆ ಬರುತ್ತವೆ. ಚಳಿಗಾಲದಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು, 2020ರಲ್ಲಿ ಈ ಭಾಗದಲ್ಲಿ ತುಂಬಾ ಕಡಿಮೆ ಕಾಣಿಸಿದವು. ಸದ್ಯ ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾಗಿವೆ. ಅವುಗಳ ರಕ್ಷಣೆ ಹೊಣೆ ಎಲ್ಲರ ಮೇಲಿದೆ’ ಎಂದು ಪಕ್ಷಿ ತಜ್ಞ ವಿಜಯ್ ಇಟ್ಟಿಗಿ ಅವರು ತಿಳಿಸಿದರು.
‘ಸೂಕ್ಷ್ಮ ಸಂವೇದನೆಯುಳ್ಳ ಈ ಪಕ್ಷಿಗಳು ಆಹಾರ ಇರುವ ಪ್ರದೇಶದಲ್ಲಿ ಜನ, ಜಾನುವಾರು ಮತ್ತು ನಾಯಿ ಸೇರಿ ಯಾವುದೇ ಪ್ರಾಣಿ ಕಂಡು ಬಂದರೂ ನೆಲಕ್ಕೆ ಇಳಿಯುವುದಿಲ್ಲ. ಜಲಾಶಯದ ಬಳಿ ವಲಸೆ ಪಕ್ಷಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಕೆಲ ತಿಂಗಳಾದರೂ ಕಾವಲುಗಾರರ ನಿಯೋಜಿಸಬೇಕು’ ಎಂದು ಪಕ್ಷಿಪ್ರೇಮಿಗಳು ಕೋರಿದ್ದಾರೆ.
ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾದ ಕ್ರೌಂಚ ಸೂಕ್ಷ್ಮ ಸಂವೇದನೆಯ ಸಂಕೋಚದ ಪಕ್ಷಿ ಮಂಗೋಲಿಯಾ, ಸೈಬೀರಿಯಾದಿಂದ ವಲಸೆ
ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅಪರೂಪದ ಪಕ್ಷಿಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಅಗತ್ಯ ಕ್ರಮ ಜರುಗಿಸಲಾಗುವುದುಆರ್. ಉಮೇಶ್ ವಲಯ ಅರಣ್ಯಾಧಿಕಾರಿ ಹೂವಿನಹಡಗಲಿ