ADVERTISEMENT

ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 12:46 IST
Last Updated 12 ನವೆಂಬರ್ 2025, 12:46 IST
   

ಹೊಸಪೇಟೆ (ವಿಜಯನಗರ): ‌ದೆಹಲಿಯ ಕೆಂಪುಕೋಟೆಯ ಬಳಿ ಮಹಾಸ್ಫೋಟದಿಂದ ಶಾಂತಿ, ಆಸ್ತಿಪಾಸ್ತಿ ಹಾನಿ ಆಗಿದೆ, ಇದನ್ನು ಉಗ್ರವಾಗಿ ಖಂಡಿಸುತ್ತಿದ್ದೇನೆ. ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಹಂಪಿಯಲ್ಲಿ ಬುಧವಾರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು, ದೇಶದ ಎಲ್ಲ ಪ್ರಜೆಗಳು ಶಾಂತಿ ಭಂಗವಾಗುವಂತಹ ಇಂತಹ ಘಟನೆಗಳು ಸಂಭವಿಸುವ ಸೂಚನೆ ದೊರೆತಲ್ಲಿ ಸೂಕ್ತ ಭದ್ರತಾ ಇಲಾಖೆಗಳಿಗೆ ತಿಳಿಸಬೇಕು, ಜನರು ಇಂತಹ ಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

‘ನಮ್ಮ ದೇಶ ಶಾಂತಿ‍ಪ್ರಿಯವಾದ ದೇಶ, ಇಲ್ಲಿ ಕ್ಷುದ್ರ ಶಕ್ತಿಗಳು, ಉಗ್ರ ಶಕ್ತಿಗಳು ಶಾಂತಿ, ನೆಮ್ಮದಿ ಕೆಡಿಸಲು ಯತ್ನಿಸುತ್ತಿವೆ. ನಮ್ಮ ದೇಶ ತಾನಾಗೀಯೆ ಹೋಗಿ, ಯುದ್ಧ, ದಬ್ಬಾಳಿಕೆ, ಉಗ್ರವಾದ ಮಾಡುವ ದೇಶವಲ್ಲ. ಯಾವುದೋ ದೇಶದ ಪ್ರೇರಣೆ ಪಡೆದು ಕೆಂಪುಕೋಟೆಯ ಬಳಿ ಬಂದು ವಿಧ್ವಂಸಕ ಕೃತ್ಯ ಎಸಗಲಾಗಿದೆ. ನಮ್ಮ ದೇಶ ಮತ್ತು ವಿಶ್ವಸಂಸ್ಥೆ ಒಟ್ಟುಗೂಡಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕಾಗಿದೆ’ ಎಂದು ಶ್ರೀಗಳು ಹೇಳಿದರು.

ADVERTISEMENT

ಇದಕ್ಕೆ ಮೊದಲು ಶ್ರಿಗಳು ಮಂತ್ರಾಲಯಕ್ಕೆ (ವಿದ್ಯಾಮಠ) ಮೂಲ ರಾಮದೇವರನ್ನು ಮರಳಿ ತಂದುಕೊಟ್ಟ ರಘನಂದನ ತೀರ್ಥರ ಮಧ್ಯಾರಾಧನೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.