ನೃತ್ಯಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮನಸೋತರು.
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಎಲ್ಲಿ ಕಾಣೆ, ಎಲ್ಲಿ ಕಾಣೆನೊ, ಎಲ್ಲಮ್ಮನಂತೋರ ಎಲ್ಲಿ ಕಾಣೆ...’ ಎಂಬ ಜೋಗತಿ ಪದ ಹಾಡುತ್ತಾ, ಕೊಡ ಹೊತ್ತು ಮಾಡಿದ ಜೋಗತಿಯರ ನೃತ್ಯಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮನಸೋತರು.
ಸ್ಥಳೀಯ ಹಿರಿಯ ಜಾನಪದ ಕಲಾವಿದೆ ಹಾಗೂ ಪದ್ಮಶ್ರೀ ಪುರಸ್ಕೃತರೂ ಆಗಿರುವ ಮಾತಾ ಮಂಜಮ್ಮ ಜೋಗತಿ ಅವರ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಜೋಗತಿ ತಂಡದವರು ನೃತ್ಯದ ಮೂಲಕ ಸ್ವಾಗತಿಸಿದರು.
ರಾಮವ್ವ ಜೋಗತಿ ಹಾಗೂ ಅಂಜಿನಮ್ಮ ಜೋಗತಿ ಅವರ ಚೌಡ್ಕಿ ಪದಗಳಿಗೆ ಶಾರದಾ ಜೋಗತಿ ಮತ್ತು ಭಾಗ್ಯಮ್ಮ ಜೋಗತಿ ಕೊಡ ಹೊತ್ತು ನೃತ್ಯ ಮಾಡಿದರೆ, ಮಂಜಮ್ಮ ಜೋಗತಿ ಮತ್ತು ಸಂಗಡಿಗರು ಹಾಡಿಗೆ ಧ್ವನಿಗೂಡಿಸಿದರು. 10 ನಿಮಿಷಗಳ ಕಾಲ ಮಾಡಿದ ನೃತ್ಯವನ್ನು ತದೇಕಚಿತ್ತದಿಂದ ವೀಕ್ಷಿಸಿದ ರಾಜ್ಯಪಾಲರು ಬೆರಗಾದರು.
ನಂತರ ಅವರನ್ನು ಆರತಿ ಮಾಡಿ ಬರಮಾಡಿಕೊಳ್ಳಲಾಯಿತು. ಮನೆಯ ಬಳಿಯಲ್ಲೇ ಸ್ಥಾಪಿಸಲಾಗಿರುವ ಹುಲಿಗೆಮ್ಮದೇವಿಯ ದರ್ಶನ ಪಡೆದ ಅವರು, ಪ್ರಶಸ್ತಿಗಳಿದ್ದ ಕೊಠಡಿಗೆ ಭೇಟಿ ನೀಡಿ ವೀಕ್ಷಿಸಿ, ಮಂಜಮ್ಮ ಅವರಿಂದ ಮಾಹಿತಿ ಪಡೆದುಕೊಂಡರು.
ಕಣ್ಣೀರು: ಮಂಜಮ್ಮ ಜೋಗತಿ ಮಾತನಾಡಿ, ‘ಸರ್ಕಾರ ನಮ್ಮನ್ನು ಹಾಗೂ ನಮ್ಮ ಸಮುದಾಯವನ್ನು ಗುರುತಿಸಿದೆ, ಆದರೆ ನೀಡಬೇಕಾದ ನಿವೇಶನ ಹಾಗೂ ಇತರೆ ಸೌಲಭ್ಯ ನೀಡಿಲ್ಲ’ ಎಂದು ಹೇಳುತ್ತ ಕಣ್ಣೀರು ಹಾಕಿದರು. ಅವರನ್ನು ಬೆನ್ನು ತಟ್ಟಿ ಸಂತೈಸಿದ ರಾಜ್ಯಪಾಲ ವಿಜಯಶಂಕರ್, ಮನವಿ ಸ್ವೀಕರಿಸಿ ಈ ಬಗ್ಗೆ ಪರಿಶೀಲಿಸುವದಾಗಿ ಭರವಸೆ ನೀಡಿದರು.
ಮೇಘಾಲಯದ ರಾಜಭವನದ ಉಡುಗೊರೆ ನೀಡಿದ ರಾಜ್ಯಪಾಲರನ್ನು ಮಂಜಮ್ಮ ಜೋಗತಿ ಮತ್ತು ಸಂಗಡಿಗರು ಸನ್ಮಾನಿಸಿದರು. ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.