ADVERTISEMENT

ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 13:09 IST
Last Updated 20 ಜನವರಿ 2026, 13:09 IST
<div class="paragraphs"><p>ಸುದ್ದಿಗೋಷ್ಠಿ</p></div>

ಸುದ್ದಿಗೋಷ್ಠಿ

   

ಹೊಸಪೇಟೆ (ವಿಜಯನಗರ): ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದಾಗಿಯೇ ಋತುಚಕ್ರ ರಜೆ ಮಂಜೂರಾಗಿದೆ, ಈಗ ಅದಕ್ಕೆ ಕಾರಣ ನಾವು ಎಂದು 100 ವರ್ಷದ ಸರ್ಕಾರಿ ನೌಕರರ ಸಂಘ ಹೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ವಿವಿಧ ಜಿಲ್ಲೆಗಳಿಗೆ ತೆರಳಿ ಜಿಲ್ಲಾ ಸಂಘಗಳನ್ನು ರಚಿಸುವ ಪ್ರಯತ್ನದ ಭಾಗವಾಗಿ ವಿಜಯನಗರ ಜಿಲ್ಲೆಗೂ ಅವರ ತಂಡ ಭೇಟಿ ನೀಡಿದ್ದು, ಸೋಮವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು.

ADVERTISEMENT

‘ಋತುಚಕ್ರ ರಜೆ ಕೊಡಿಸಿ ಎಂದು ಹಲವು ಬಾರಿ ಕೇಳದ್ದೆವು, ಅದನ್ನು ನೌಕರರ ಸಂಘ ಕಡೆಗಣಿಸಿತು. ನಾವು ಎರಡು ವರ್ಷದ ಹಿಂದೆ ಸಂಘ ಸ್ಥಾಪಿಸಿದ ಬಳಿಕ ಇದಕ್ಕಾಗಿ ಸತತ ಪ್ರಯತ್ನ ನಡೆಸಿದೆವು. ಮುಖ್ಯಮಂತ್ರಿ, ಡಿಸಿಎಂ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಸಹಿತ ಹಲವು ಸಚಿವರಿಗೆ ಮನವರಿಕೆ ಮಾಡಿದೆವು. ಅದಕ್ಕೆ ಸಮ್ಮತಿ ಸೂಚಿಸಿದರು, ಬೆಂಗಳೂರಿನ ಬಾಲಭವನ ಬಳಿ ನಮ್ಮ ಸಂಘಕ್ಕೆ ಪ್ರತ್ಯೇಕ ಕಚೇರಿಯನ್ನೂ ನೀಡಿದ್ದಾರೆ. ಸರ್ಕಾರ ನಮ್ಮ ಮಾತು ಆಲಿಸುತ್ತಿದ್ದು, ಇತರ ಬೇಡಿಕೆಗಳಿಗೆ ಸಹ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

‘ಸರ್ಕಾರಿ ನೌಕರರ ಸಂಘದಲ್ಲಿ ನಾವೆಲ್ಲ ಇದ್ದೇವೆ, ನಾನು ಅಲ್ಲಿ ಕಾರ್ಯದರ್ಶಿಯೂ ಆಗಿದ್ದೆ. ರಾಜ್ಯ ಸರ್ಕಾರದ ಒಟ್ಟು ನೌಕರರ ಪೈಕಿ ಮಹಿಳೆಯರು ಶೇ 52ರಷ್ಟು ಮಂದಿ ಇದ್ದೇವೆ. ಹೀಗಿರುವಾಗ ನಮಗೂ ಸಂಘದಲ್ಲಿ ಸಮಾನ ಅವಕಾಶ ಕೊಡಿ ಎಂದು ಕೇಳಿದ್ದರೆ ಅದನ್ನು ಕಡೆಗಣಿಸಲಾಯಿತು. ಬೇಕಿದ್ದರೆ ನೀವೇ ಪ್ರತ್ಯೇಕ ಸಂಘ ಕಟ್ಟಿಕೊಳ್ಳಿ ಎಂದು ಸವಾಲು ಹಾಕಿದರು. ಅದಕ್ಕಾಗಿಯೇ ಈ ಸಂಘ ರಚಿಸಿಕೊಂಡಿದ್ದೇವೆ. ಮಹಿಳಾ ನೌಕರರ ಶ್ರೇಯೋಭಿವೃದ್ಧಿಗಾಗಿಯೇ ಈ ಸಂಘ ಕೆಲಸ ಮಾಡಲಿದೆ, ಈಗಾಗಲೇ 15 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳ ರಚನೆಯಾಗಿದೆ’ ಎಂದು ಅವರು ಹೇಳಿದರು.

ಬೇಡಿಕೆಗಳು: 8ನೇ ವೇತನ ಆಯೋಗ ರಚನೆ, ಎನ್‌ಪಿಎಸ್ ರದ್ದತಿ, ಮಾತೃತ್ವ ರಜೆಯನ್ನು ಒಂದು ವರ್ಷದ ವರೆಗೆ ವಿಸ್ತರಿಸುವುದು, ಸೆಪ್ಟೆಂಬರ್ 13ರಂದು (ಮೇರಿ ದೇವಾಸಿಯಾ ಜನ್ಮದಿನ) ಮಹಿಳಾ ಸರ್ಕಾರಿ ನೌಕರರ ದಿನ ಎಂದು ಘೋಷಿಸುವುದು ಸಹಿತ ಹಲವು ಬೇಡಿಕೆಗಳನ್ನು ಸಂಘ ಸರ್ಕಾರದ ಮುಂದೆ ಇಟ್ಟಿದೆ ಎಂದು ರೋಶಿನಿ ಹೇಳಿದರು.

ಸಂಘ ದುರ್ಬಲ ತಂತ್ರ ಅಲ್ಲ: ಪ್ರತ್ಯೇಕ ಸಂಘ ರಚಿಸಲು ಕುಮ್ಮಕ್ಕು ನೀಡಿ ಸರ್ಕಾರ ಸರ್ಕಾರಿ ನೌಕರರನ್ನು ಒಡೆದು ಆಳುವ ತಂತ್ರ ರೂಪಿಸಿದೆಯೇ ಎಂದು ಕೇಳಿದಾಗ, ಸಂಘದ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ ಅಲ್ಲಗಳೆದರು. ಜಿಲ್ಲೆಯಲ್ಲಿರುವ ಮಹಿಳಾ ನೌಕರರು ಹೊಸ ಸಂಘ ಇಲ್ಲಿ ಸ್ಥಾಪನೆಯಾದ ಬಳಿಕ ಸೇರಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎಂ. ಆಶಾರಾಣಿ. ನೀಲಮ್ಮ ಗಚ್ಚಿನಮಠ, ವಿಜಯಕುಮಾರಿ, ಪದ್ಮಾವತಿ, ರೇಖಾ ಇದ್ದರು.