ಹೊಸಪೇಟೆ (ವಿಜಯನಗರ): ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಎರಡು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಕೆಲವು ಗಣಿ ಬ್ಲಾಕ್‌ಗಳನ್ನು ಜೋಡಿಸಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಸುಪ್ರೀಂ ಕೋರ್ಟ್ ಈಗಾಗಲೇ ನೀಡಿದ ನಾಲ್ಕು ಆದೇಶಗಳ ಸ್ಪಷ್ಟ ಉಲ್ಲಂಘನೆ ಎಂಬುದನ್ನು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಗುರುತಿಸಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಸಿ ತನ್ನ ವಿವರವಾದ ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಕಳೆದ ಏಪ್ರಿಲ್ 8ರಂದು ನೀಡಿದೆ, ರಾಜ್ಯ ಸರ್ಕಾರದಿಂದ ಉತ್ತರ ಬರುವತನಕ ಗಣಿಗಾರಿಕೆಗೆ ಅನುಮತಿ ನೀಡದೆ ಇರಲು ಏಪ್ರಿಲ್ 16ರಂದು ನಡೆದ ಕೇಂದ್ರ ಅರಣ್ಯ ಸಚಿವಾಲಯದ ಅರಣ್ಯ ಸಲಹಾ ಸಮಿತಿ ನಿರ್ಧರಿಸಿದೆ, ರಾಜ್ಯದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದರು.
ವ್ಯಾಸನಕೆರೆ ಕಬ್ಬಿಣದ ಅದಿರು ಬ್ಲಾಕ್‌ನಲ್ಲಿ 405.4 ಹೆಕ್ಟೇರ್, ಜೈಸಿಂಗ್‌ಪುರ ಸೌತ್ ಬ್ಲಾಕ್‌ನಲ್ಲಿ 297.38 ಹೆಕ್ಟೇರ್, ಜೈಸಿಂಗ್‌ಪುರ ನಾರ್ತ್ ಬ್ಲಾಕ್‌ನಲ್ಲಿ 298.59 ಹೆಕ್ಟೇರ್, ಸೋಮನಹಳ್ಳಿ ಬ್ಲಾಕ್‌ನಲ್ಲಿ 190.13 ಹೆಕ್ಟೇರ್, ಎಚ್.ಆರ್.ಗವಿಯಪ್ಪ ಎಂಎಲ್ ನಂ.2483 ಬ್ಲಾಕ್‌ನಲ್ಲಿ 40.04 ಹೆಕ್ಟೇರ್ ಗಣಿ ಬ್ಲಾಕ್‌ಗಳ ಹರಾಜಿನಲ್ಲಿ ಸುಪ್ರೀಂ ಕೋರ್ಟ್ 2013ರ ಏಪ್ರಿಲ್ 18ರಂದು ನೀಡಿದ ಆದೇಶ ಸಹಿತ ನಾಲ್ಕು ಆದೇಶಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂಬುದನ್ನು ಸಿಇಸಿ ತನ್ನ 214 ಪುಟಗಳ ವರದಿಯಲ್ಲಿ ಬೊಟ್ಟುಮಾಡಿ ತೋರಿಸಿದೆ ಎಂದು ಅವರು ಹೇಳಿದರು.
ಗಣಿಗಾರಿಕೆಗೆ ಅನುಮತಿ ನೀಡುವಲ್ಲಿ ತನ್ನ ಆದೇಶ ಉಲ್ಲಂಘನೆ ಆಗಿದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್ 2024ರ ಮಾರ್ಚ್ 14ರಂದು ವಿವರವಾದ ವರದಿ ಸಲ್ಲಿಸಲು ಸಿಇಸಿಗೆ ಸೂಚಿಸಿತ್ತು. ಇದೇ ವಿಚಾರದಲ್ಲಿ ಕಳೆದ ಫೆಬ್ರುವರಿ 10ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ ಎಂದು ಹಿರೇಮಠ ತಿಳಿಸಿದರು.
ಕರ್ನಾಟಕ ಐರನ್ ಆ್ಯಂಡ್ ಸ್ಟೀಲ್ ಮ್ಯಾನುಫೆಕ್ಚರಿಂಗ್ ಅಸೋಷಿಯೇಷನ್ (ಕಿಸ್ಮಾ) 2024ರ ಆಗಸ್ಟ್ 18ರಂದು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಅನುಮತಿ ನೀಡಲಾದ ಬ್ಲಾಕ್‌ಗಳಲ್ಲಿ ತಕ್ಷಣ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಆದರೆ ಗಣಿ ಹರಾಜಿನಲ್ಲಿ ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಸಿಇಸಿ ಹೇಳಿ ತನ್ನ ವರದಿ ಸಲ್ಲಿಸಿದೆ ಎಂದರು.
ಜನ ಸಂಗ್ರಾಮ ಪರಿಷತ್‌ನ ಶ್ರೀಶೈಲ ಆಲ್ದಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.