ಹೊಸಪೇಟೆ (ವಿಜಯನಗರ): ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 20ರಂದು ರಾಜ್ಯ ಸರ್ಕಾರದ ಎರಡನೇ ವರ್ಷಾಚರಣೆ ಪ್ರಯುಕ್ತ ನಡೆಯಲಿರುವ ಸಮರ್ಪಣಾ ಸಂಕಲ್ಪ ಸಮಾವೇಶದೊಂದಿಗೆ ಜಿಲ್ಲೆಯ ಅಭಿವೃದ್ಧಿಗೂ ವೇಗ ಸಿಗಲಿದೆ. ಹಲವು ಯೋಜನೆಗಳ ಕುರಿತು ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಹಾಗೂ ಎಐಸಿಸಿ ವೀಕ್ಷಕ ರವಿ ಬೋಸರಾಜು ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ₹13 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ, ಅದರ ಜತೆಯಲ್ಲೇ ಸಕ್ಕರೆ ಕಾರ್ಖಾನೆಗೂ ಶಿಲಾನ್ಯಾಸ ನೆರವೇರಿಸಲಾಗುವುದು. ಇದನ್ನು ಸ್ವತಃ ಮುಖ್ಯಮಂತ್ರಿ ಅವರೇ ಮಾಡಲಿದ್ದಾರೆ. ಎರಡು ತಿಂಗಳೊಳಗೆ ಇದು ನಡೆಯಲಿದೆ ಎಂದರು.
ಸ್ಟೀಲ್ ಪಾರ್ಕ್: ಜಿಲ್ಲೆಯಲ್ಲಿ ಸ್ಟೀಲ್ ಪಾರ್ಕ್ ನಿರ್ಮಿಸುವ ಯೋಜನೆ ಇದೆ, ಇದಕ್ಕೆ 2,000 ಎಕರೆ ಜಮೀನು ಬೇಕಿದ್ದು, ಜಿಲ್ಲೆಯ ಅಭಿವೃದ್ಧಿಗೆ ಇದು ಬಹಳ ದೊಡ್ಡ ಕೊಡುಗೆ ನೀಡಲಿದೆ. ಸಕ್ಕರೆ ಕಾರ್ಖಾನೆ ನಿರ್ಮಿಸುವ ವಿಚಾರದಲ್ಲಿ ಸಹ ಯಾವುದೇ ಸಂಶಯ ಬೇಡ ಎಂದು ಅವರು ಹೇಳಿದರು.
ಪಕ್ಷ ಒಗ್ಗಟ್ಟಿನಿಂದಿದೆ: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಬೇಡ ಅಂದಿದ್ದೆ: ‘ಮೇ 25ರಂದು ಹುಬ್ಬಳ್ಳಿಯಲ್ಲಿ 2.50 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿ, 42 ಸಾವಿರ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವ ಕಾರ್ಯಕ್ರಮವಿದೆ. ಹೀಗಾಗಿ ಹೊಸಪೇಟೆಯಲ್ಲಿ ವಾರದ ಮೊದಲು ಮತ್ತೊಂದು ಬೃಹತ್ ಕಾರ್ಯಕ್ರಮ ನಡೆಸುವುದು ಬೇಡ ಎಂದು ಹೇಳಿದ್ದೆ. ಆದರೆ ಮುಖ್ಯಮಂತ್ರಿ ಅವರು ಕೇಳಲಿಲ್ಲ, ನಿನಗೆ ಮತ್ತು ಕೃಷ್ಣ ಬೈರೇಗೌಡರಿಗೆ ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದೇನೆ, ನೀವು ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಇದೆ, ನೀವು ಮಾಡಲೇಬೇಕು ಎಂದು ಹೇಳಿದರು. ಅದಕ್ಕಾಗಿ ನಾನು ಒಪ್ಪಿಕೊಂಡು ಸಮಾವೇಶದ ಸಿದ್ಧತೆಗಾಗಿ ಕಳೆದ ನಾಲ್ಕು ದಿನಗಳಿಂದ ಇಲ್ಲೇ ಇದ್ದೇನೆ’ ಎಂದು ಸಚಿವ ಜಮೀರ್ ಹೇಳಿದರು.
ದಟ್ಟಣೆಯಿಂದ ತೊಂದರೆ ಆಗದು: ಭಾರಿ ಸಂಖ್ಯೆಯಲ್ಲಿ ಜನ ಸೇರಿದರೂ ದಟ್ಟಣೆ ಆಗದಂತೆ ಎಚ್ಚರ ವಹಿಸಲಾಗುವುದು. ಪ್ರತಿ ತಾಲ್ಲೂಕಿನ ವಾಹನ ನಿಲುಗಡೆ ಸ್ಥಳವನ್ನು ನಿಗದಿಪಡಿಸಿ ಅಲ್ಲೇ ನಿಲ್ಲುವಂತೆ ಮಾಡಲಾಗುವುದು. ಪ್ರಯಾಣಿಕರನ್ನು ಇಳಿಸಿ ವಾಹನಗಳು ನಿಗದಿತ ಸ್ಥಳದಲ್ಲೇ ನಿಲುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೈದಾನದ ಜತೆಗೆ ಮೂರೂ ಬದಿಯ ರಸ್ತೆಗಳ ಬಳಕೆಯೂ ಆಗಲಿದೆ, ಹೀಗಾಗಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದರೂ ತೊಂದರೆ ಆಗದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಸಿರಾಜ್ ಶೇಖ್ ಮಾತನಾಡಿ, ಜಿಲ್ಲೆಯ ಕಾಂಗ್ರೆಸ್‌ಗೆ ಒದಗಿದ ಬಹುದೊಡ್ಡ ಕಾರ್ಯಕ್ರಮ ನಿರ್ವಹಣೆ ಹೊಣೆಗಾರಿಕೆ ಇದಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಈ ಕೆಲಸ ಮಾಡಲಿದ್ದೇವೆ ಎಂದರು.
––––
‘ಜನಸೇವೆ ಮಾಡಿದ್ದೇವೆ–ತಿಳಿಸುತ್ತೇವೆ’
ಗ್ಯಾರಂಟಿ ಯೋಜನೆಗಳು ಬಹಳಷ್ಟು ಜನರ ಜೀವನಕ್ಕೆ ನೆರವಾಗಿದೆ. ಇದು ನಿಜವಾದ ಜನಸೇವೆ ಎಂದೇ ಭಾವಿಸಿದ್ದೇವೆ. ವಸತಿಯ ದಾಖಲೆಯೇ ಇಲ್ಲದವರಿಗೆ ದಾಖಲೆ ಮಾಡಿಸಿಕೊಡುವುದು ಸಹ ದೊಡ್ಡ ಕೆಲಸ. ಇದನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವುದರ ಜತೆಗೆ ಜನತೆಯ ಮುಂದೆ ನಾವು ಹೀಗೆ ನುಡಿದು ಅದರಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳಲು ಒದಗಿದ ಅವಕಾಶವೇ ಈ ಸಮರ್ಪಣಾ ಸಂಕಲ್ಪ ಸಮಾವೇಶ. ಇದೊಂದು ಪಕ್ಷಾತೀತವಾಗಿ ರಾಜ್ಯ ಸರ್ಕಾರದ ವತಿಯಿಂದಲೇ ನಡೆಯುವ ಕಾರ್ಯಕ್ರಮ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
––––
ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಸಲು ಅವಕಾಶ ನೀಡಿದ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆಗಳು. ನಾವೆಲ್ಲ ಒಟ್ಟಾಗಿದ್ದೇವೆ, ಸಚಿವ ಜಮೀರ್ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ
ಎಚ್.ಆರ್.ಗವಿಯಪ್ಪ, ಶಾಸಕ
––––
ಮುಖ್ಯಮಂತ್ರಿ ಅವರಿಗೆ ಈ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ, ಕಾಳಜಿ. ಅದಕ್ಕಾಗಿಯೇ ಇಲ್ಲೇ ಸಾಧನಾ ಸಮಾವೇಶ ನಡೆಸಬೇಕೆಂದು ಸೂಚಿಸಿದರು. ನಾವೆಲ್ಲ ಅವರ ಆಶಯದಂತೆ ಕೆಲಸ ಮಾಡುತ್ತಿದ್ದೇವೆ
ಜಮೀರ್ ಅಹಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.