ADVERTISEMENT

ಸಚಿವರ ಅಳಿಯನಿಂದ ವಾಲ್ಮೀಕಿ ಸಮಾಜದ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 22:02 IST
Last Updated 4 ಸೆಪ್ಟೆಂಬರ್ 2021, 22:02 IST
ಸಂದೀಪ್‌ ಸಿಂಗ್‌
ಸಂದೀಪ್‌ ಸಿಂಗ್‌   

ಹೊಸಪೇಟೆ (ವಿಜಯನಗರ): ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪ ಎದುರಿಸುತ್ತಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸೋದರ ಅಳಿಯ, ಬಿಜೆಪಿ ಯುವ ಮುಖಂಡ ಸಂದೀಪ್‌ ಸಿಂಗ್‌, ಶನಿವಾರ ವಾಲ್ಮೀಕಿ ನಾಯಕ ಸಮಾಜದ ಕ್ಷಮೆಯಾಚಿಸಿದ್ದಾರೆ.

ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ ಅವರ ಮಧ್ಯಸ್ಥಿಕೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಏಳು ಕೇರಿಯ ವಾಲ್ಮೀಕಿ ನಾಯಕ ಸಮಾಜದ 50ಕ್ಕೂ ಹೆಚ್ಚು ಮುಖಂಡರು ಹಾಗೂ ಸಂದೀಪ್‌ ಸಿಂಗ್‌ ಪಾಲ್ಗೊಂಡಿದ್ದರು.

‘ವಾಲ್ಮೀಕಿ ಸಮಾಜದಿಂದಲೇ ನಿಮ್ಮ ಮಾವ ಆನಂದ್‌ ಸಿಂಗ್‌ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಮಾಜ ನಿಮಗೇನು ಅನ್ಯಾಯ ಮಾಡಿದೆ’ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ ಸೇರಿದಂತೆ ಸಮಾಜದ ಮುಖಂಡರು ಪ್ರಶ್ನಿಸಿದ್ದಾರೆ.

ADVERTISEMENT

ಅದಕ್ಕೆ ಸಂದೀಪ್‌ ಸಿಂಗ್‌, ‘ನನ್ನಿಂದ ತಪ್ಪಾಗಿದೆ. ಭವಿಷ್ಯದಲ್ಲಿ ಈ ರೀತಿ ಮಾಡಲಾರೆ. ನನ್ನನ್ನು ಸಮಾಜದವರು ಕ್ಷಮಿಸಬೇಕು’ ಎಂದು ಸಭೆಯಲ್ಲಿ ಹೇಳಿದರು ಎಂಬ ಸಂಗತಿಯನ್ನು ವಿಶ್ವನಾಥ್‌ ರಾವ್‌ ಕುಲಕರ್ಣಿ, ನಾಣಿಕೆರೆ ತಿಮ್ಮಯ್ಯ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಈ ಕುರಿತು ಸಂದೀಪ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.

ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪ ಎದುರಿಸುತ್ತಿರುವ ಸಂದೀಪ್‌ ಸಿಂಗ್‌ ವಿರುದ್ಧ ಸೆ.1ರಂದು ವಾಲ್ಮೀಕಿ ನಾಯಕ ಸಮಾಜದವರು ಸಭೆ ಸೇರಿ, ಕ್ಷಮೆಯಾಚನೆಗೆ ಎರಡು ದಿನಗಳ ಗಡುವು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.