ADVERTISEMENT

ತಹಶೀಲ್ದಾರ್ ಕಚೇರಿ| ಭ್ರಷ್ಟ ವ್ಯವಸ್ಥೆ ಸಲ್ಲ: ಶಾಸಕ ಎಚ್‌.ಆರ್.ಗವಿಯಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:17 IST
Last Updated 6 ಜುಲೈ 2025, 5:17 IST
ಹೊಸಪೇಟೆಯಲ್ಲಿ ಶನಿವಾರ ಶಾಸಕ ಎಚ್‌.ಆರ್.ಗವಿಯಪ್ಪ ಅವರು ತಾಲ್ಲೂಕು ಕಚೇರಿಯಲ್ಲಿ ಡಿಜಿಟಲ್‌ ದಾಖಲೆಗಳನ್ನು ಅರ್ಜಿದಾರರಿಗೆ ನೀಡುವ ಮೂಲಕ ಡಿಜಿಟಲ್ ಅಭಿಲೇಖಾಲಯ ಉದ್ಘಾಟಿಸಿದರು. ತಹಶೀಲ್ದಾರ್ ಶ್ರುತಿ ಎಂ.ಎಂ.ಹಾಜರಿದ್ದರು
ಹೊಸಪೇಟೆಯಲ್ಲಿ ಶನಿವಾರ ಶಾಸಕ ಎಚ್‌.ಆರ್.ಗವಿಯಪ್ಪ ಅವರು ತಾಲ್ಲೂಕು ಕಚೇರಿಯಲ್ಲಿ ಡಿಜಿಟಲ್‌ ದಾಖಲೆಗಳನ್ನು ಅರ್ಜಿದಾರರಿಗೆ ನೀಡುವ ಮೂಲಕ ಡಿಜಿಟಲ್ ಅಭಿಲೇಖಾಲಯ ಉದ್ಘಾಟಿಸಿದರು. ತಹಶೀಲ್ದಾರ್ ಶ್ರುತಿ ಎಂ.ಎಂ.ಹಾಜರಿದ್ದರು    

ಹೊಸಪೇಟೆ (ವಿಜಯನಗರ): ‘ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಹಣ ಕೊಡದೆ, ಮಧ್ಯವರ್ತಿಗಳು ಇಲ್ಲದೆ ಕೆಲಸ ಅಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ, ಇದನ್ನು ಸಹಿಸಲಾಗದು, ಇಂತಹ ಆರೋಪ ಕೇಳಿ ಬರದ ರೀತಿಯಲ್ಲಿ ಕೆಲಸ ನಿಭಾಯಿಸಬೇಕು’ ಎಂದು ಶಾಸಕ ಎಚ್.ಆರ್‌.ಗವಿಯಪ್ಪ ಸೂಚಿಸಿದರು.

ಶನಿವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಕ್ರೋಮ್‌ ಬುಕ್‌ (ಲ್ಯಾಪ್‌ಟಾಪ್‌) ವಿತರಣೆ ಹಾಗೂ ಅಭಿಲೇಖಾಲಯದ ಡಿಜಿಟಲೀಕರಣವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ತಾಲ್ಲೂಕಿನಲ್ಲಿ ಮೂಲಸೌಲಭ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಕಂದಾಯ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಹೇಳಿದ ಬಳಿಕ ಮಾಧ್ಯಮದವರು ಕಚೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ, ದುಡ್ಡು ಕೊಡದೆ ಕೆಲಸ ಆಗುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದರು. ಶಾಸಕರ ಮೃದು ಧೋರಣೆಯನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು. ಇದರಿಂದ ಕಳವಳಗೊಂಡ ಶಾಸಕರು, ಇನ್ನು ಮುಂದೆ ಇಂತಹ ದೂರು ಕೇಳಿಬರಬಾರದು ಎಂದು ತಹಶೀಲ್ದಾರ್ ಶ್ರುತಿ ಎಂ.ಎಂ.ಅವರಿಗೆ ಸೂಚಿಸಿದರು.

ADVERTISEMENT

‘ಹಣ ತೆಗೆದುಕೊಂಡು ಕೆಲಸ ಮಾಡಿದ್ದು ಕಂಡುಬಂದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ, ಕೆಲವರನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸಿದ್ದೂ ಇದೆ. ಮುಂದೆಯೂ ಅದನ್ನು ಮುಂದುವರಿಸಲಾಗುವುದು. ಈಗ ಕೇಳಿಬಂದಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಡಿಎಂಎಫ್ ಹಣ: ‘ಮೂರು ತಿಂಗಳ ಹಿಂದೆ ಡಿಎಂಎಫ್ ಹಣ ಬಂದಿದೆ. ನಗರಸಭೆ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳ ಸರ್ವೇ ನಡೆಸಲಾಗುತ್ತಿದೆ, ಈಗಾಗಲೇ ಎಂಟು ವಾರ್ಡ್‌ಗಳ ಸರ್ವೇ ಮುಗಿದಿದೆ, 27 ವಾರ್ಡ್‌ಗಳ ಸರ್ವೇ ಬಾಕಿ ಇದೆ. ಮೊದಲ ಕಂತು ರೂಪದಲ್ಲಿ ₹8 ಕೋಟಿಯನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಒಟ್ಟು ₹23 ಕೋಟಿ ಮಂಜೂರಾಗಿದೆ’ ಎಂದು ಶಾಸಕರು ಮಾಹಿತಿ ನೀಡಿದರು.

ನನ್ನ ಮತ್ತು ಜಿಲ್ಲಾಧಿಕಾರಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಗತ್ಯದ ಕೆಲಸಗಳಿಗೆ ಅವರು ಒಪ್ಪಿಗೆ ಸೂಚಿಸುತ್ತಿದ್ದಾರೆ ಕ್ಷೇತ್ರದ ಪ್ರಗತಿಗೆ ಒಟ್ಟಾಗಿ ಶ್ರಮಿಸುತ್ತಿದ್ದೇವೆ
ಎಚ್‌.ಆರ್.ಗವಿಯಪ್ಪ ಶಾಸಕ
ಹಿರಿಯ ಅಧಿಕಾರಿಗಳಿಂದ ಅಡ್ಡಗಾಲು?
ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಪೊಲೀಸ್ ಠಾಣೆ ಅಗತ್ಯವಾಗಿ ಬೇಕು. ಅದಕ್ಕೆ ಬಂದ ಹಣವನ್ನು ವಾಪಸ್ ಕಳುಹಿಸಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳ ಧೋರಣೆ ಸಂಶಯದಿಂದ ಕೂಡಿದೆ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮಾಧ್ಯಮದವರು ಕೇಳಿದಾಗ ಈ ಬಗ್ಗೆ ಪೊಲೀಸ್‌ ಜಿಲ್ಲಾಡಳಿತದ ಅಧಿಕಾರಿಗಳನ್ನು ಕರೆಸಿ ಮಾತನಾಡುವೆ ಇತರ ಕಾಮಗಾರಿಗಳ ಕುರಿತು ಸಹ ಗಮನ ಹರಿಸುವೆ ಎಂದು ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.