ADVERTISEMENT

ಉಸ್ತುವಾರಿ ಸಚಿವರ ಬದಲಿಸದಿದ್ದರೆ ಉಗ್ರ ಹೋರಾಟ: ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 9:49 IST
Last Updated 17 ಜೂನ್ 2021, 9:49 IST
ಶಾಸಕ ಜಿ. ಸೋಮಶೇಖರ್‌ ರೆಡ್ಡಿ
ಶಾಸಕ ಜಿ. ಸೋಮಶೇಖರ್‌ ರೆಡ್ಡಿ    

ಹೊಸಪೇಟೆ (ವಿಜಯನಗರ): ‘ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರನ್ನು ಬದಲಿಸಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ನೀಡಬೇಕು. ಜತೆಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯೂ ನೀಡಬೇಕು. ಒಂದುವೇಳೆ ಉಸ್ತುವಾರಿ ಬದಲಿಸದಿದ್ದರೆ ಉಗ್ರ ಹೋರಾಟ ನಡೆಸುವೆ’ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಎಚ್ಚರಿಕೆ ನೀಡಿದರು.

‘ಈ ಹಿಂದೆಯೇ ಶ್ರೀರಾಮುಲು ಅವರಿಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಾಡಿದ್ದರೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ಪಾಲಿಕೆ ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಯಾರೊಬ್ಬರೂ ಕೂಡ ಯಾಕೆ ಸೋಲಾಯ್ತು ಎಂದು ಕೇಳಲಿಲ್ಲ. ಈ ಬಗ್ಗೆ ನನಗೆ ಅಸಮಾಧಾನ ಇದೆ’ ಎಂದು ಗುರುವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ಇದೆ. ಬಿ.ಎಸ್‌. ಯಡಿಯೂರಪ್ಪನವರು ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಒಳ್ಳೆಯದು. ಯಾರಿಗಾದರೂ ಒಂದುವೇಳೆ ಅಸಮಾಧಾನ ಇದ್ದರೆ ಅದನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯವಲ್ಲ. ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರ ನಿರ್ವಹಣೆಗೆ ಎಲ್ಲರೂ ಒತ್ತುಕೊಡಬೇಕಿದೆ. ನಾನು ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುತ್ತಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಬಳ್ಳಾರಿಯಲ್ಲಿ ಮಾಡುವುದಕ್ಕೆ ಬೇಕಾದಷ್ಟು ಕೆಲಸವಿದೆ. ಆಂಜನೇಯಸ್ವಾಮಿ, ಕನಕದುರ್ಗಮ್ಮದೇವಿ, ಕೋಟೆ ಮಲ್ಲೇಶ್ವರ ದೇವರು ಆಶಿರ್ವಾದ ಮಾಡಿದರೆ ಸಚಿವ ಸ್ಥಾನ ತಾನಾಗಿಯೇ ಸಿಗುತ್ತೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.