ADVERTISEMENT

ಹೊಸಪೇಟೆ | ಹಣ ವಂಚನೆ: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:02 IST
Last Updated 21 ಜುಲೈ 2025, 6:02 IST
ಹಣ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಭಾನುವಾರ ಹೊಸಪೇಟೆಯಲ್ಲಿ ಶಾಸಕ ಎಚ್.ಆರ್‌.ಗವಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು
ಹಣ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಭಾನುವಾರ ಹೊಸಪೇಟೆಯಲ್ಲಿ ಶಾಸಕ ಎಚ್.ಆರ್‌.ಗವಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು   

ಹೊಸಪೇಟೆ (ವಿಜಯನಗರ): ನಗರ ಮತ್ತು ಸುತ್ತಮುತ್ತ ನೂರಾರು ಅಮಾಯಕ ಮಹಿಳೆಯರಿಂದ ಹಣ ಪಡೆದು ವಂಚಿಸಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಮನೆ ಬಳಿ ಭಾನುವಾರ ಪ್ರತಿಭಟನೆ ನಡೆಯಿತು.

ಸಿಪಿಎಂ, ಡಿವೈಎಫ್‌ಐ, ಡಿಎಚ್‌ಎಸ್‌ ಹಾಗೂ ಇತರ ಕೆಲವು ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯ ವೇಳೆ ಕೆಲವು ಮಹಿಳೆಯರು ಕಣ್ಣೀರು ಹಾಕಿದರು. ಪ್ರಿಯಾಂಕಾ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ಸಂಪರ್ಕ ಇರುವ ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬರ ವಿರುದ್ಧ ತನಿಖೆ ಆಗಲೇಬೇಕು ಎಂದು ಅವರು ಒತ್ತಾಯಿಸಿದರು.

ಗೋಳು ಆಲಿಸದ್ದಕ್ಕೆ ಆಕ್ಷೇಪ: ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದ ವೇಳೆ ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಮನವಿ ಪಡೆದು ಹೊರಟು ಹೋದಾಗ ಹೈಡ್ರಾಮಾ ನಡೆಯಿತು. ಪ್ರತಿಭಟನೆ ತೀ‌ವ್ರ ಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಶಾಂತಗೊಳಿಸಲು ಪ್ರಯತ್ನಿಸಿದರು. ಶಾಸಕರು ಬಂದು ಸರಿಯಾಗಿ ವಿಷಯ ಕೇಳಿಸಿಕೊಂಡು ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ಬಳಿಕ ಮತ್ತೆ ಮನೆಯಿಂದ ಹೊರಬಂದ ಶಾಸಕರು, ಈ ಬಗ್ಗೆ ಎಸ್‌ಪಿ ಅವರೊಂದಿಗೆ ಮಾತನಾಡಿ ಮುಂದಿನ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದರು.

ADVERTISEMENT

‘ಪ್ರಿಯಾಂಕ ಜೈನ್‌ ಮತ್ತು ಕವಿತಾ ಈಶ್ವರ್‌ ಸಿಂಗ್‌ ಅವರು ಅನೇಕ ವರ್ಷಗಳಿಂದ ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಮತ್ತು ರಾಜಕೀಯ ಪಕ್ಷಗಳ ರಾಜ್ಯ ಮಟ್ಟದ ಪಧಾದಿಕಾರಿಗಳು ಆಗಿದ್ದಾರೆ. ಇದರಿಂದಾಗಿ ಸ್ಥಳೀಯ ಮಟ್ಟದ ಪೊಲೀಸ್‌ ಅಧಿಕಾರಿಗಳಿಂದ ಸೂಕ್ತ ರೀತಿಯಲ್ಲಿ ತನಿಖೆ ಆಗಲು ಸಾಧ್ಯವಿರುವುದಿಲ್ಲ. ಹೀಗಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು, ಶಾಸಕರು ಇದನ್ನು ಸರ್ಕಾರದ ಗಮನಕ್ಕೆ ತಂದು ಸಿಬಿಐ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯ ವೇಳೆ ಮುಖಂಡರಾದ  ಆರ್.ಭಾಸ್ಕರ್‌ ರೆಡ್ಡಿ, ಜಂಬಯ್ಯ ನಾಯಕ, ಕೆ.ನಾಗರತ್ನಮ್ಮ, ಎನ್.ಯಲ್ಲಾಲಿಂಗ, ಎ.ಕರುಣಾನಿಧಿ, ವಿ.ಸ್ವಾಮಿ, ಸ್ವಪ್ನ, ಈಡಿಗರ ಮಂಜುನಾಥ, ಎಂ.ಗೋಪಾಲ, ಬಿ.ರಮೇಶ್‌ ಕುಮಾರ್, ಶಕುಂತಲಾ ಎಲ್ಲಮ್ಮ, ಹೇಮಂತ್‌ ನಾಯ್ಕ, ನೌಷದ್‌ ಅಲಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.