ADVERTISEMENT

ಹೊಸಪೇಟೆ: ಬಿಜೆಪಿ ಸೇರಿದ ಎಎಪಿ ಸದಸ್ಯ ಶೇಕ್ಷಾವಲಿ ಮನೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 10:29 IST
Last Updated 12 ಜನವರಿ 2022, 10:29 IST
ಬಿಜೆಪಿ ಸೇರಿದ ಶೇಕ್ಷಾವಲಿ ಮನೆಗೆ ಎಎಪಿ ಕಾರ್ಯಕರ್ತರು ಬುಧವಾರ ಮುತ್ತಿಗೆ ಹಾಕಿದರು.
ಬಿಜೆಪಿ ಸೇರಿದ ಶೇಕ್ಷಾವಲಿ ಮನೆಗೆ ಎಎಪಿ ಕಾರ್ಯಕರ್ತರು ಬುಧವಾರ ಮುತ್ತಿಗೆ ಹಾಕಿದರು.   

ಹೊಸಪೇಟೆ (ವಿಜಯನಗರ): ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ‘ಆಮ್‌ ಆದ್ಮಿ’ ಪಕ್ಷದಿಂದ (ಎಎಪಿ) ಗೆದ್ದು ಬಿಜೆಪಿ ಸೇರಿದ ಶೇಕ್ಷಾವಲಿ ಮನೆಗೆ ಎಎಪಿ ಕಾರ್ಯಕರ್ತರು ಬುಧವಾರ ಮುತ್ತಿಗೆ ಹಾಕಿದರು.

ರಾಜ್ಯದ ವಿವಿಧ ಭಾಗಗಳಿಂದ ವಾಹನಗಳಲ್ಲಿ ಬಂದಿದ್ದ ಎಎಪಿ ಮುಖಂಡರು, ಕಾರ್ಯಕರ್ತರು ನಗರದ ಬಳ್ಳಾರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಶೇಕ್ಷಾವಲಿ ಮನೆಗೆ ತೆರಳಿ ಮುತ್ತಿಗೆ ಹಾಕಿದರು. ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಈ ವೇಳೆ ಶೇಕ್ಷಾವಲಿ ಹಾಗೂ ಎಎಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ‘ಶೇಕ್ಷಾವಲಿ ಅವರು ಎಎಪಿ ಚಿಹ್ನೆಯಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಚುನಾವಣೆಯಲ್ಲಿ 40 ಮತಗಳಷ್ಟೇ ಪಡೆದ ಬಿಜೆಪಿ ಸೇರಿ ಪಕ್ಷದ್ರೋಹ ಎಸಗಿದ್ದಾರೆ. ₹30 ಲಕ್ಷ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದ ಆಡಿಯೋ ಸಿಕ್ಕಿದೆ. ಅದನ್ನು ಇಷ್ಟರಲ್ಲೇ ಬಹಿರಂಗಪಡಿಸಲಾಗುವುದು. ಶೇಕ್ಷಾವಲಿ ಬಿಜೆಪಿ ಸೇರುವುದಕ್ಕೆ ಅಭ್ಯಂತರವಿಲ್ಲ. ಅವರು ಎಎಪಿಯಿಂದ ಗೆದ್ದಿದ್ದು, ಪಕ್ಷ ಹಾಗೂ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು. ನಂತರ ಬೇರೆ ಪಕ್ಷದಿಂದ ಚುನಾವಣೆ ಸ್ಪರ್ಧಿಸಿ ಗೆದ್ದು ತೋರಿಸಲಿ‘ ಎಂದು ಸವಾಲು ಹಾಕಿದರು.

ಈ ಕುರಿತು ಶೇಕ್ಷಾವಲಿ ಅವರನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಡಿ. 27ರಂದು ನಗರಸಭೆಗೆ ನಡೆದ ಚುನಾವಣೆಯಲ್ಲಿ ಶೇಕ್ಷಾವಲಿ ಅವರು 22ನೇ ವಾರ್ಡಿನಿಂದ ಎಎಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಇದರೊಂದಿಗೆ ಎಎಪಿ ರಾಜ್ಯದಲ್ಲಿ ಖಾತೆ ತೆರೆದಿತ್ತು. ಜ. 6ರಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ ಎಂಟು ಜನ ಪಕ್ಷೇತರರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು.

ಎಎಪಿ ಮುಖಂಡರಾದ ಬಸವರಾಜ, ಮೋಹನ್ ದಾಸರಿ, ಅಕ್ರಂ ಬಾಷ, ವಿ.ಬಿ.ಮಲ್ಲಪ್ಪ, ಮಹಮ್ಮದ್ ನಾಸಿರ್, ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.