ADVERTISEMENT

ಹಗರಿಬೊಮ್ಮನಹಳ್ಳಿ ಪುರಸಭೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:24 IST
Last Updated 5 ಅಕ್ಟೋಬರ್ 2025, 4:24 IST
ಹಗರಿಬೊಮ್ಮನಹಳ್ಳಿಯ ಪುರಸಭೆ ಕಚೇರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶನಿವಾರ ಭೇಟಿ ನೀಡಿದರು
ಹಗರಿಬೊಮ್ಮನಹಳ್ಳಿಯ ಪುರಸಭೆ ಕಚೇರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶನಿವಾರ ಭೇಟಿ ನೀಡಿದರು   

ಹಗರಿಬೊಮ್ಮನಹಳ್ಳಿ: ‘ಪಟ್ಟಣದಲ್ಲಿ ಪುರಸಭೆ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ‘ಪುರಸಭೆ ಕಚೇರಿಯ ಹಳೇ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಕಚೇರಿಯ ಕಟ್ಟಡ ನಿರ್ಮಿಸಲು ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದಿದ್ದಾರೆ. ಆದರೂ ಈವರೆಗೂ ಕಾಮಗಾರಿ ಆರಂಭಿಸಿಲ್ಲ’ ಎಂದು ಮಾಹಿತಿ ನೀಡಿದರು. ಗುತ್ತಿಗೆದಾರರಿಗೆ ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ADVERTISEMENT

‘23ನೇ ವಾರ್ಡ್‍ನ ಕುರದಗಡ್ಡಿಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ₹25 ಲಕ್ಷ ಮೊತ್ತದ ಕಾಮಗಾರಿ ಮಂಜೂರಾಗಿದ್ದು ಆರಂಭಿಸುವಂತೆ, ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು’ ಎಂದು ಸದಸ್ಯ ಜೋಗಿ ಹನುಮಂತಪ್ಪ ವಿನಂತಿಸಿಕೊಂಡರು.

ಸ್ಥಿರ ಆಸ್ತಿಗಳಿಗೆ ಫಾರಂ-3 ವಿತರಿಸುವ ಗೊಂದಲವನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಅಧ್ಯಕ್ಷ ಮನವಿ ಮಾಡಿದರು. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪುರಸಭೆಯಿಂದ ಸಂಪೂರ್ಣ ಬೆಂಬಲ ನೀಡಿ ಶೇ 100ರಷ್ಟು ಸಾಧನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಸದಸ್ಯರಾದ ದೀಪಕ್ ಸಾ ಕಠಾರೆ, ನಾಗರಾಜ ಜನ್ನು, ಮುಖಂಡ ಸಿಕಂದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.