ಪೌರ ಕಾರ್ಮಿಕರು (ಸಾಂದರ್ಭಿಕ ಚಿತ್ರ)
– ಎ.ಐ ಚಿತ್ರ
ಹೊಸಪೇಟೆ (ವಿಜಯನಗರ): ಪೌರ ವೃಂದದ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸಹಿತ 19 ಬೇಡಿಕೆಗಳನ್ನು ಮುಂದಿಟ್ಟು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ ಮಧ್ಯರಾತ್ರಿ ಕೊನೆಗೊಳಿಸಿದ್ದು, ಶನಿವಾರ ಬೆಳಿಗ್ಗೆಯಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ.
‘ಕರ್ನಾಟಕ ರಾಜ್ಯ ಪೌರನೌಕರರ ಸಂಘದ 19 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಭರವಸೆ ನೀಡಿದ ಮೇರೆಗೆ ಮುಷ್ಕರವನ್ನು ಶುಕ್ರವಾರ ಮಧ್ಯರಾತ್ರಿ ಹಿಂದೆಗೆದುಕೊಳ್ಳಲಾಯಿತು. ಶನಿವಾರ ಬೆಳಿಗ್ಗೆ 5 ಗಂಟೆಯಿಂದಲೇ ಸ್ವಚ್ಛತೆ ಸಹಿತ ನಮ್ಮ ಇತರ ಕೆಲಸ ಆರಂಭಿಸಿದ್ದೇವೆ’ ಎಂದು ಸಂಘದ ಹೊಸಪೇಟೆ ಶಾಖೆಯ ಅಧ್ಯಕ್ಷ ಬಿ.ಎಂ.ನಾಗೇಂದ್ರ ವರ್ಮಾ ತಿಳಿಸಿದರು.
ಬೆಳಿಗ್ಗೆ ಕಸದ ವಾಹನಗಳ ಓಡಾಟ ಆರಂಭವಾಯಿತು. ಆದರೆ ಹಲವೆಡೆ ಕಸದ ರಾಶ್ರಿ ಗುಡ್ಡೆಯಂತೆ ಬೆಳೆದ ಕಾರಣ ಮನೆ ಮನೆ ಕಸ ಸಂಗ್ರಹಕ್ಕೆ ನಿಗದಿತ ಸಮಯಕ್ಕೆ ಬರುವುದು ಸಾಧ್ಯವಾಗಲಿಲ್ಲ.
ಹೊಸಪೇಟೆ ನಗರದಲ್ಲಿ ಪ್ರತಿದಿನ ಸರಾಸರಿ 120 ಟನ್‌ನಷ್ಟು ಕಸ ಸಂಗ್ರಹವಾಗುತ್ತದೆ. ಈ ಮೂಲಕ ನಾಲ್ಕು ದಿನ ಕಸ ಎತ್ತದ ಕಾರಣ 480 ಟನ್‌ನಷ್ಟು ಕಸ ಮನೆಗಳು ಮತ್ತು ರಸ್ತೆ ಬದಿಯಲ್ಲೇ ಉಳಿದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.