ಹೊಸಪೇಟೆ (ವಿಜಯನಗರ): ಗಣಿಬಾಧಿತ 18 ಕ್ಯಾಂಪ್‌ಗಳಿಗೆ ಹತ್ತಿರವಿರುವ ಕಾರಿಗನೂರಿನಲ್ಲಿ ಹಾಗೂ ಟಿ.ಬಿ.ಡ್ಯಾಂ ಪ್ರದೇಶದಲ್ಲಿ ‘ನಮ್ಮ ಕ್ಲಿನಿಕ್’ ಸಜ್ಜುಗೊಂಡು ತಿಂಗಳುಗಳೇ ಕಳೆದಿದ್ದು, ವೈದ್ಯರು, ಸಿಬ್ಬಂದಿಯ ನಿಯೋಜನೆಯೂ ಆಗಿದೆ. ಆದರೆ ವೈದ್ಯರಿಗೆ ರೋಗಿಗಳು ಕಾಯುವಂತೆ ನಮ್ಮ ಕ್ಲಿನಿಕ್‌ಗಳು ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ಕಾಯುತ್ತಿವೆ!
‘ಕಾರಿಗನೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸುವ ಅಗತ್ಯ ಇದೆ. ಕನಿಷ್ಠ ಪಕ್ಷ ಇದೀಗ ನಮ್ಮ ಕ್ಲಿನಿಕ್ ಮಂಜೂರಾಗಿದೆ. ಕ್ಲಿನಿಕ್ ಸಿದ್ಧವಾಗಿ ಎಂಟು ತಿಂಗಳೇ ಕಳೆದಿದೆ, ಆದರೆ ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ, ನಮ್ಮ ಕಷ್ಟ ಇನ್ನೂ ಪರಿಹಾರವಾಗಿಲ್ಲ’ ಎಂದು ಗಣಿಬಾಧಿತ ಕ್ಯಾಂಪ್‌ಗಳ ಹತ್ತಾರು ಮಂದಿ ‘ಪ್ರಜಾವಾಣಿ’ ಜತೆ ನೋವು ಹಂಚಿಕೊಂಡರು.
‘ಸುಮಾರು ಒಂದೂವರೆ ತಿಂಗಳ ಹಿಂದೆ ಕಾರಿಗನೂರು ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲು ಸಿದ್ದತೆ ನಡೆದಾಗ ಶಾಸಕರಿಂದಲೇ ಉದ್ಘಾಟನೆ ಆಗಬೇಕು ಎಂಬ ಆಕ್ಷೇಪ ಬಂತು, ಬಳಿಕ ಅದು ಮುಂದಕ್ಕೆ ಹೋಯಿತು, ಬಳಿಕ ಇಲ್ಲಿಯವರೆಗೂ ಉದ್ಘಾಟನೆಯ ಭಾಗ್ಯ ಸಿಗಲೇ ಇಲ್ಲ’ ಎಂದು ಸ್ಥಳೀಯರು ದೂರಿದರು.
ಶೀಘ್ರ ಉದ್ಘಾಟನೆ: ‘ಎರಡೂ ಕ್ಲಿನಿಕ್‌ಗಳು ಸಜ್ಜಾಗಿವೆ, ಒಬ್ಬರು ವೈದ್ಯ, ನರ್ಸ್, ಲ್ಯಾಬ್ ಟೆಕ್ನೀಶಿಯನ್ ಸಹಿತ ಒಟ್ಟು ಐವರು ಸಿಬ್ಬಂದಿಯ ನಿಯೋಜನೆಯೂ ಆಗಿದೆ. ಶಾಸಕರ ಸಮಯ ಅಲಭ್ಯದಿಂದಾಗಿ ಉದ್ಘಾಟನೆ ಸ್ವಲ್ಪ ವಿಳಂಬವಾಗಿದೆ, ಶಾಸಕರು ಶೀಘ್ರ ಸಮಯ ನೀಡುವ ವಿಶ್ವಾಸ ಇದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಎಲ್.ಆರ್.ಶಂಕರ್ ನಾಯ್ಕ್ ತಿಳಿಸಿದರು.
‘ಉಕ್ಕಡಕೇರಿಯಲ್ಲಿ ಆರಂಭವಾಗಿರುವ ನಮ್ಮ ಕ್ಲಿನಿಕ್‌ನಿಂದ ಬಹಳಷ್ಟು ಜನರಿಗೆ ಪ್ರಯೋಜನ ಆಗಿದೆ. ದಿನಕ್ಕೆ 50ರಿಂದ 60ರಷ್ಟು ರೋಗಿಗಳು ಅಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಒಟ್ಟು ಐದು ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಗುರಿ ಇದೆ. ಬಸ್ ನಿಲ್ದಾಣದ ಬಳಿ ಸ್ಥಳ ಇಲ್ಲದ ಕಾರಣ ಅದನ್ನು ಅನಂತಶಯನಗುಡಿ ಸಮೀಪ ಪಾಂಡುರಂಗ ಕಾಲೋನಿ ಬಳಿ ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸುವ ಯೋಜನೆ ಇದೆ. 88 ಮುದ್ಲಾಪುರದಲ್ಲಿ ಸಹ ಇನ್ನೊಂದು ನಮ್ಮ ಕ್ಲಿನಿಕ್ ಬರಲಿದ್ದು, ಅದಕ್ಕಾಗಿ ಬಾಡಿಗೆ ಕಟ್ಟಡ ಹುಡುಕುತ್ತಿದ್ದೇವೆ’ ಎಂದರು.
ಈ ಬಗ್ಗೆ ಶಾಸಕರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ಗಣಿಬಾಧಿತ ಪ್ರದೇಶದ ಸಂಜೀವಿನಿ
ಕಾರಿಗನೂರಿನಲ್ಲಿ ವರ್ಷಗಳ ಹಿಂದೆಯೇ ಸಮುದಾಯ ಆರೋಗ್ಯ ಕೇಂದ್ರ ಆರಂಭವಾಗಬೇಕಿತ್ತು. ಪಿ.ಕೆ.ಹಳ್ಳಿಯ ಡಾಲ್ಮಿಯಾ ಕ್ಯಾಂಪ್ ಸಹಿತ 19 ಗಣಿಬಾಧಿತ ಕ್ಯಾಂಪ್‌ಗಳು ಹಾಗೂ ಇತರ ಜನವಸತಿ ಪ್ರದೇಶಗಳ 20 ಸಾವಿರಕ್ಕೂ ಅಧಿಕ ಜನರಿಗೆ ಪ್ರಯೋಜನ ಕೊಡುವಂತಹ ಆರೋಗ್ಯ ಕೇಂದ್ರ ಅದಾಗಿರುತ್ತಿತ್ತು. ಆದರೆ ಸಮುದಾಯ ಆರೋಗ್ಯ ಕೇಂದ್ರ ಬರಲಿಲ್ಲ ಬದಲಿಗೆ ನಮ್ಮ ಕ್ಲಿನಿಕ್ ಬಂದಿದೆ. ಜನ ಅಷ್ಟಾದರೂ ಬಂತು ಎಂಬ ಖುಷಿಯಲ್ಲಿದ್ದಾರೆ ಆದರೆ ಎಂಟು ತಿಂಗಳಿಂದ ಅದು ಉದ್ಘಾಟನೆಗೊಳ್ಳದೆ ಇರುವುದನ್ನ ಕಂಡು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಮ್ಮ ಕ್ಲಿನಿಕ್‌ಗಳಿಂದಾಗಿ 100 ಹಾಸಿಗೆ ಆಸ್ಪತ್ರೆ ಮೇಲಿನ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ ಹೀಗಾಗಿ ನಗರದ ಐದು ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸುವುದು ನಿಶ್ಚಿತಡಾ.ಎಲ್.ಆರ್.ಶಂಕರ್ ನಾಯ್ಕ್, ಡಿಎಚ್‌ಒ
ಕಾರಿಗನೂರು ಭಾಗದಲ್ಲಿ ಬಹಳಷ್ಟು ಜನರು ಉಸಿರಾಟದ ಸಮಸ್ಯೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗರ್ಭಿಣಿಯರು ಹೊಸಪೇಟೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ನಮ್ಮ ಕ್ಲಿನಿಕ್ ತಕ್ಷಣ ಆರಂಭಿಸಿ.ಗಿರಿಜಾ ಕಾರಿಗನೂರು, ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.