
ಹೊಸಪೇಟೆಯ ಗಾಂಧಿ ವೃತ್ತದಲ್ಲಿ ಶನಿವಾರ ರಸ್ತೆ ಸುರಕ್ಷತಾ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ವಿ.ರಾಜಶೇಖರ್ ಚಾಲನೆ ನೀಡಿದರು
–ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ಸಂಚಾರಿ ನಿಯಮಗಳ ಪಾಲನೆಗಳನ್ನು ಉಲ್ಲಂಘನೆ ಮಾಡುವುದರಿಂದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಪಘಾತ ರಹಿತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
ಇಲ್ಲಿ ಶನಿವಾರ ವಿವಿಧ ಇಲಾಖೆಗಳು ಮತ್ತು ಸಂಘಟನೆಗಳ ಸಹಯೋಗದೊಂದಿಗೆ ನಡೆದ 37ನೇ ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ, ರಸ್ತೆ ನಿಯಮಗಳ ಪಾಲನೆ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸಿದರೆ ಅವರ ಪೋಷಕರಿಗೆ ₹25 ಸಾವಿರ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಕೂಲಿ ಕಾರ್ಮಿಕರು ಮೃತಪಟ್ಟರೆ ಮತ್ತು ಗಾಯಗೊಂಡರೆ ಕಾನೂನು ಬದ್ಧವಾಗಿ ₹10 ಲಕ್ಷಕ್ಕೂ ಹೆಚ್ಚು ಪರಿಹಾರ ಸಿಗುವ ಅವಕಾಶವಿದ್ದರೂ, ನಿಯಮ ಪಾಲನೆ ಮಾಡಿ ಜೀವ ಉಳಿಸಲು ಮೊದಲ ಆದ್ಯತೆ ನೀಡಬೇಕು’ ಎಂದರು.
ಎಎಸ್‌ಪಿ ಜಿ.ಮಂಜುನಾಥ ಮಾತನಾಡಿ, ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹವನ್ನು ಜ.1 ರಿಂದ 31ರವರೆಗೆ ಎಲ್ಲಾ ಪ್ರೌಢಶಾಲೆಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ ಈ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ರಸ್ತೆ ಸುರಕ್ಷತಾ ಕಾನೂನು ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ್ ಮಾತನಾಡಿ, ಮನುಷ್ಯನ ಜೀವ ಅತ್ಯಾಮೂಲ್ಯವಾದದ್ದು, ಅ ಜೀವವನ್ನು ಯಾವುದೇ ರೀತಿಯ ಅಪಘಾತಕ್ಕೆ ಒಳಗಾಗದೇ ನಿಮ್ಮ ಜೀವವನ್ನು ಕೊನೆವರೆಗೂ ನಿಮ್ಮ ಕುಟುಂಬದ ಜೊತೆಗೆ ನಡೆಸಲು ಕಾನೂನು ನಿಯಮಗಳ ಪಾಲನೆ ಮಾಡಬೇಕು ಎಂದರು.
ಎಡಿಸಿ ಇ.ಬಾಲಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಎನ್.ಸುಬ್ರಮಣ್ಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ರೂಪಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಶೃತಿ ತೇಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ದೊಂಬರಮತ್ತೂರ, ನಗರಸಭೆಯ ಪೌರಾಯುಕ್ತ ಎ.ಶಿವಕುಮಾರ್, ತಹಶೀಲ್ದಾರ್ ಶ್ರುತಿ ಎಂ.ಎಂ., ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ಡಿ.ಡಿ.ಪಿ.ಯು. ನಾಗರಾಜ್ ಹವಾಲ್ದಾರ್, ಬಿಇಒ ಶೇಖರಪ್ಪ ಹೊರಪೇಟೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.