ADVERTISEMENT

ಹೊಸಪೇಟೆ: ನಾಯಕ ಪದ ಕೈಬಿಟ್ಟಿದ್ದು ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮೇ 2022, 12:20 IST
Last Updated 4 ಮೇ 2022, 12:20 IST
ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು
ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಪ್ರಮಾಣ ಪತ್ರಗಳಲ್ಲಿ ‘ನಾಯಕ’ ಪದ ಕೈಬಿಟ್ಟಿರುವುದನ್ನು ವಿರೋಧಿಸಿ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ರಾಜ್ಯಪಾಲರು, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯ್ಕಡ ಬುಡಕಟ್ಟಿಗೆ ಸೇರಿದ ನಾಯಕ ಪಂಗಡದವರಾದ ಮ್ಯಾಸ ನಾಯಕರಿಗೆ 1976ರಿಂದ ಜಾತಿ ಪ್ರಮಾಣ ಪತ್ರದಲ್ಲಿ ನಾಯಕ ಎಂದು ನಮೂದಿಸುತ್ತ ಬರಲಾಗಿದೆ. ಆದರೆ, ಕಳೆದ 5–6 ತಿಂಗಳಿಂದ ನಾಡಕಚೇರಿಗಳಲ್ಲಿ ನಾಯಕ ಪದ ಬಿಟ್ಟು ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಟೀಕಿಸಿದ್ದಾರೆ.

1976ರಲ್ಲಿ ನಾಯ್ಕಡ, ನಾಯಕ ಎಂದು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲಾಗಿದೆ. 2020ರಲ್ಲಿ ಪರಿವಾರ ಮತ್ತು ತಳವಾರ ಪದ ಸೇರಿಸಿದ್ದಾರೆ. ಪರಿವಾರ, ತಳವಾರ ಸಮುದಾಯದವರಿಗೂ ನಾಯಕ ಪ್ರಮಾಣ ಪತ್ರ ಕೊಡಲಾಗುತ್ತಿದೆ. ನಾಯಕರಿಗೂ ತಳವಾರ, ಪರಿವಾರದವರಿಗೆ ಯಾವುದೇ ಸಂಬಂಧವಿಲ್ಲ. ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದ್ದು, ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಆಗಿರುವ ತಪ್ಪನ್ನು ಎರಡು ವಾರಗಳಲ್ಲಿ ಸರಿಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಂಘಟನೆಯ ಅಧ್ಯಕ್ಷ ಗೆರೆಗಲ್‌ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್‌, ವಿಶ್ವನಾಥ ಮಾಳಗಿ, ಈರಣ್ಣ ಪೂಜಾರಿ. ರಾಮಸ್ವಾಮಿ, ಪಾಲಯ್ಯ, ನಿಂಗಪ್ಪ. ವೆಂಕಟೇಶ್, ಲಕ್ಷ್ಮಣ, ಪರಶುರಾಮ, ಕುಪೇಂದ್ರ, ಭರಮಪ್ಪ, ಫಕಿರೇಶ, ನರಿ ಮಂಜು, ಮಹೇಂದ್ರ, ಓಬಯ್ಯ ಜೋಗದ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.