ADVERTISEMENT

ಬಿಸಿಯೂಟ: 4 ತಿಂಗಳಿನಿಂದ ಅನುದಾನ ಇಲ್ಲ

ತರಕಾರಿ, ಮೊಟ್ಟೆ ಖರೀದಿಗೆ ದುಡ್ಡಿಲ್ಲ– ಯೋಜನೆ ನಿರ್ವಹಣೆಗೆ ಶಿಕ್ಷಕರ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 19:40 IST
Last Updated 6 ಅಕ್ಟೋಬರ್ 2023, 19:40 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕೆ.ಸೋಮಶೇಖರ್

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸರ್ಕಾರ ನಾಲ್ಕು ತಿಂಗಳಿಂದ ತರಕಾರಿ, ಮೊಟ್ಟೆ ಖರೀದಿಗೆ ಹಣ ಬಿಡುಗಡೆಗೊಳಿಸಿಲ್ಲ. ಇದರಿಂದ ಈ ಯೋಜನೆ ನಿರ್ವಹಿಸಲು ಶಿಕ್ಷಕರು ಪರದಾಡುವಂತಾಗಿದೆ.

ಶಾಲೆಗಳಿಗೆ ಸರ್ಕಾರ ಪ್ರತಿ ತಿಂಗಳು ಆಹಾರ ಪದಾರ್ಥ ಪೂರೈಸುತ್ತದೆ. ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ತರಕಾರಿ, ಮಸಾಲೆ, ಉಪ್ಪು ಹಾಗೂ ಮೊಟ್ಟೆ ಖರೀದಿಗೆ ಹಣ ಬಿಡುಗಡೆಗೊಳಿಸಿಲ್ಲ. ಇವುಗಳ ಬೆಲೆ ಏರಿಕೆ ಒಂದೆಡೆಯಿದ್ದರೆ, ಖರೀದಿಗೆ ಹಣ ಬಿಡುಗಡೆ ಆಗದಿರುವುದು ಮತ್ತೊಂದು ಸಮಸ್ಯೆಯಾಗಿದೆ.

ADVERTISEMENT

‘ನಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಮೊಟ್ಟೆ, ತರಕಾರಿ ಖರೀದಿಸಿ, ಶಾಲೆಗೆ ತರುತ್ತಿದ್ದೇವೆ. ಕೆಲ ತರಕಾರಿ ಅಂಗಡಿಗಳಲ್ಲಿ ಹತ್ತಾರು ಸಾವಿರ ರೂಪಾಯಿ ಬಾಕಿ ಉಳಿದಿದೆ. ಬಾಕಿ ಪಟ್ಟಿ ಬೆಳೆಯುತ್ತಿದೆ ಹೊರತು ಅನುದಾನ ಮಾತ್ರ ಬಿಡುಗಡೆಯಾಗುತ್ತಿಲ್ಲ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ 61 ಕಿರಿಯ ಪ್ರಾಥಮಿಕ, 79 ಹಿರಿಯ ಪ್ರಾಥಮಿಕ, 30 ಪ್ರೌಢಶಾಲೆ, 4 ಪಬ್ಲಿಕ್ ಶಾಲೆಗಳು ಸೇರಿ 179 ಶಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ 19,854, ಪ್ರೌಢಶಾಲೆಗಳಲ್ಲಿ 5,791 ವಿದ್ಯಾರ್ಥಿಗಳು ಸೇರಿ 25,645 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆ ಫಲಾನುಭವಿಗಳಿದ್ದಾರೆ.

‘ಮಧ್ಯಾಹ್ನದ ಬಿಸಿಯೂಟಕ್ಕೆ ಅಕ್ಕಿ, ಬೇಳೆ, ಎಣ್ಣೆಯನ್ನು ಸರ್ಕಾರ ಪೂರೈಸುತ್ತಿದೆ. ತರಕಾರಿ, ಮಸಾಲೆ, ಉಪ್ಪು ಖರೀದಿಗೆ 1 ರಿಂದ 5ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ ₹1.93 ಹಾಗೂ 6 ರಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹2.89ರಂತೆ ಸರ್ಕಾರ ಹಣ ನೀಡುತ್ತದೆ. ಪ್ರತಿ ವಿದ್ಯಾರ್ಥಿಗೆ ವಾರಕ್ಕೆ ಎರಡರಂತೆ ಮೊಟ್ಟೆ ನೀಡಲಾಗುತ್ತಿದೆ. ಇಷ್ಟೂ ದುಡ್ಡನ್ನು ಇದೀಗ ಶಿಕ್ಷಕರೇ ಹೊಂದಿಸಿಕೊಂಡು ಊಟ ಬಡಿಸುತ್ತಿದ್ದೇವೆ’ ಎಂದು ಶಿಕ್ಷಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.