ADVERTISEMENT

ಹರಪನಹಳ್ಳಿ: 19 ಕೆರೆಗೆ ಸದ್ಯಕ್ಕಿಲ್ಲ ಜೀವಜಲ

ಹರಪನಹಳ್ಳಿ: 31 ಕೆರೆಗಳಿಗೆ ಹರಿದ ತುಂಗಭದ್ರಾ ನದಿ ನೀರು

ವಿಶ್ವನಾಥ ಡಿ.
Published 18 ಆಗಸ್ಟ್ 2023, 4:51 IST
Last Updated 18 ಆಗಸ್ಟ್ 2023, 4:51 IST
ಹರಪನಹಳ್ಳಿ ಪಟ್ಟಣದ ಐತಿಹಾಸಿಕ ಹಿರೆಕೆರೆ ನದಿಗೆ ನೀರು ಹರಿಸುವ ಉದ್ದೇಶದಿಂದ ಅಳವಡಿಸಿರುವ ಪೈಪ್ ಬರಿದಾಗಿದೆ
ಹರಪನಹಳ್ಳಿ ಪಟ್ಟಣದ ಐತಿಹಾಸಿಕ ಹಿರೆಕೆರೆ ನದಿಗೆ ನೀರು ಹರಿಸುವ ಉದ್ದೇಶದಿಂದ ಅಳವಡಿಸಿರುವ ಪೈಪ್ ಬರಿದಾಗಿದೆ   

ಹರಪನಹಳ್ಳಿ: ಕರ್ನಾಟಕ ನೀರಾವರಿ ನಿಗಮ ಬರಪೀಡಿತ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದೆ. ಆದರೆ ನೀರು ಹರಿಸಲು ಗುರುತಿಸಲಾದ 50 ಕೆರೆಗಳ ಪೈಕಿ 19 ಕೆರೆಗಳಿಗೆ ಸದ್ಯಕ್ಕೆ ನದಿ ನೀರು ಹರಿಯುತ್ತಿಲ್ಲ.

ತಾಲ್ಲೂಕಿನ ಜನತೆಯ ಹೋರಾಟದ ಫಲವಾಗಿ ಸರ್ಕಾರ ₹208 ಕೋಟಿ ಮೊತ್ತದ ಈ ಯೋಜನೆಗೆ ಚಾಲನೆ ಕೊಟ್ಟಿತ್ತು. 2018 ಏಪ್ರಿಲ್ 1ರಿಂದ ಗುತ್ತಿಗೆ ಪಡೆದ ಖಾಸಗಿ ಕಂಪನಿಯು 6 ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸದೆ, ಕೆರೆಗಳಿಗೆ ನೀರುಣಿಸಲು ವಿಳಂಬ ಮಾಡಿರುವುದಕ್ಕೆ ನದಿ ನೀರು ನಿರೀಕ್ಷೆಯಲ್ಲಿರುವ ಗ್ರಾಮಗಳ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನದಿ ದಡಕ್ಕೆ ಹೊಂದಿಕೊಂಡಿರುವ ಹಲವಾಗಲು ಕೆರೆಗೂ ಸದ್ಯಕ್ಕೆ ನೀರು ಹರಿಸುತ್ತಿಲ್ಲ. ಉಳಿದಂತೆ ಹರಪನಹಳ್ಳಿ ಸಣ್ಣ ಕೆರೆ ಮತ್ತು ಹಿರೆಕೆರೆ, ಶಿಂಗ್ರಿಹಳ್ಳಿ ತಾಂಡ, ಶೃಂಗಾರತೋಟ, ಬಾಗಳಿ, ಹುಲಿಕಟ್ಟೆ, ಹಳ್ಳಿಕೇರೆ, ಸತ್ತೂರು, ಕಂಚಿಕೇರೆ, ಕ್ಯಾರಕಟ್ಟೆ, ತೌಡೂರು, ಎಂ.ಕಟ್ಟಿಕೆರೆ, ಕೂಲಹಳ್ಳಿ ಸೇರಿ 19 ಕೆರೆಗಳಿಗೆ ಸದ್ಯಕ್ಕೆ ಹರಿಸುವುದಿಲ್ಲ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.

ADVERTISEMENT

31 ಕೆರೆಗಳಿಗೆ ಮಾತ್ರ ನೀರು: ಕುಂಚೂರು, ಬೇವಿನಹಳ್ಳಿ, ಅರಸನಾಳು, ಕೆ.ಕಲ್ಲಹಳ್ಳಿ, ಯಲ್ಲಾಪುರ, ನಾರಾಯಣಪುರ, ಉದ್ಗಟ್ಟಿ, ಮಾದಾಪುರ, ಚಿಕ್ಕಹಳ್ಳಿ, ಅಲಮರಸೀಕೆರೆ, ಮಾಡಲಗೇರೆ, ವಡ್ಡಿನ ದಾದಾಪುರ, ತೊಗರಿಕಟ್ಟೆ, ಕಾನಹಳ್ಳಿ, ಅಲಗಿಲವಾಡ, ಚಿರಸ್ತಹಳ್ಳಿ, ತೆಲಿಗಿ, ಬಿಕ್ಕಿಕಟ್ಟೆ, ಶಿಂಗ್ರಿಹಳ್ಳಿ, ಕನ್ನನಾಯ್ಕನಹಳ್ಳಿ, ನೀಲಗುಂದ, ಮಜ್ಜಿಗೇರೆ, ಬೆಂಡಿಗೇರೆ, ಯಡಿಹಳ್ಳಿ, ತಲವಾಗಲು, ಗುಂಡಗತ್ತಿ, ರಾಗಿಮಸಲವಾಡ, ನಾಗಲಾಪುರ ಗ್ರಾಮದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಹರಪನಹಳ್ಳಿ ತಾಲ್ಲೂಕು ಚಿರಸ್ತಹಳ್ಳಿ ಗ್ರಾಮದ ಐತಿಹಾಸಿಕ ಕೆರೆಗೆ ನೀರು ಹರಿಸಲಾಗಿದೆ
ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಗ್ರಾಮದ ಐತಿಹಾಸಿಕ ಕೆರೆಗೆ ನೀರು ಹರಿಸಲಾಗಿದೆ

ಕಂಚಿಕೇರೆ ಗ್ರಾಮದ ರೈತರೊಬ್ಬರು ಹೆಚ್ಚಿನ ಪರಿಹಾರಕ್ಕೆ ಕೋರಿ 30 ಮೀಟರ್‌ ಪೈಪ್‌ ಲೈನ್‌ ಅಳವಡಿಸುವ ಕಾಮಗಾರಿಗೆ ನ್ಯಾಯಾಲಯದ ತಡೆಯಾಜ್ಞೆ ತಂದ ಕಾರಣ 19 ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ

-ಮಹಾಂತೇಶ್ ಎಇಇ ಕರ್ನಾಟಕ ನೀರಾವರಿ ನಿಗಮ ದಾವಣಗೆರೆ

ನೀರು ಪೂರೈಸಲು 190 ಕಿ.ಮೀ. ಪೈಪ್ ಲೈನ್

ಕರ್ನಾಟಕ ನೀರಾವರಿ ನಿಗಮ ಪ್ರತಿ ವರ್ಷ ಜುಲೈನಿಂದ ನವೆಂಬರ್ ವರೆಗೆ 5 ತಿಂಗಳ ಅವಧಿಯಲ್ಲಿ ಕೆರೆಗಳಿಗೆ ತುಂಗಭದ್ರಾ ನದಿ ನೀರು ಹರಿಸಲು ಯೋಜನೆ ರೂಪಿಸಿತ್ತು. ತುಂಗಭದ್ರಾ ನದಿಯಿಂದ ನಿಟ್ಟೂರು ಪಂಪ್ ಹೌಸ್ ನಲ್ಲಿ ನೀರು ಪಡೆದು ಅಲ್ಲಿಂದ ತೌಡೂರಿನಲ್ಲಿ 35 ಕ್ಯುಬಿಕ್ ಮೀಟರ್ ಸಾಮರ್ಥ್ಯದ ತೊಟ್ಟಿ ಕೆ.ಕಲ್ಲಹಳ್ಳಿ 65 ಕ್ಯುಬಿಕ್ ಮೀಟರ್ ನೀರು ಸಾಮರ್ಥ್ಯದ ತೊಟ್ಟಿಗಳಲ್ಲಿ ಸಂಗ್ರಹಿಸಿಕೊಂಡು ಅವುಗಳಿಂದ ಒಟ್ಟು 190 ಕಿ.ಮೀ. ಉದ್ದ ಪೈಪ್ ಲೈನ್ ಮೂಲಕ ನೀರು ಹರಿಸಲಾಗುತ್ತದೆ. ‘ಒಂದೊಂದು ಕೆರೆಗೆ ಪ್ರತಿ ವರ್ಷ 0.75 ಟಿಎಂಸಿ ಅಡಿ ನೀರು ಹರಿಸಲಾಗುವುದು. ಇದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿ ಆಗಲಿದೆ’ ಎಂದು ನೀರಾವರಿ ನಿಗಮದ ಎಇಇ ಮಹಾಂತೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.