ಹರಪನಹಳ್ಳಿ: ಈರುಳ್ಳಿ ದರ ಕುಸಿತಗೊಂಡಿರುವ ಪರಿಣಾಮ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಈರುಳ್ಳಿ ಬೆಳೆ ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ 1,800 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಆಗುತ್ತದೆ. ಚಿಗಟೇರಿ ಹೋಬಳಿಯಲ್ಲಿಯೇ 1,300ರಿಂದ 1,500 ಹೆಕ್ಟೇರ್ ಪ್ರದೇಶ ಹಾಗೂ ಉಳಿದೆಡೆ 200ರಿಂದ 300 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯುತ್ತಾರೆ.
ಪ್ರತಿ ವರ್ಷ ಒಂದಿಲ್ಲೊಂದು ಕಾರಣಕ್ಕೆ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷ ಹೆಚ್ಚು ಮಳೆ ಸುರಿದ ಪರಿಣಾಮ ಸುಳಿ ರೋಗ ತಗುಲಿ ಸಾಕಷ್ಟು ಪ್ರಮಾಣದ ಈರುಳ್ಳಿ ಬೆಳೆ ಹಾನಿಯಾಗಿದೆ. ಅಳಿದುಳಿದ ಈರುಳ್ಳಿ ಕಿತ್ತು ಮಾರಾಟ ಮಾಡಲು, ಯೋಗ್ಯ ಬೆಲೆ ಇಲ್ಲ, ಹಾಗಾಗಿ ರೈತರು ಕಟಾವಿಗೆ ಹಿಂಜರಿಯುತ್ತಿದ್ದಾರೆ.
ಕೊಂಗನಹೊಸೂರು ಗ್ರಾಮದಲ್ಲಿ ರೈತ ಶೆಂಗೆನಹಳ್ಳಿ ಕರಿಬಸಪ್ಪ ಅವರು ಮೂರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಬೆಳೆ, ಮಳೆಗೆ ಸಿಕ್ಕು ಕೊಳೆ ರೋಗಕ್ಕೆ ತುತ್ತಾಗಿದೆ. ಇಳುವರಿ ಕುಂಠಿತ ಆತಂಕದಿಂದ ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ. ಚಿಗಟೇರಿ ಗ್ರಾಮದಲ್ಲಿ ವೀರೇಶ್ ಬಣಕಾರ ಅವರು ಒಂದೂವರೆ ಎಕರೆ, ಚನ್ನಬಸಪ್ಪ ಬಣಕಾರ ಅವರು ಎರಡು ಎಕರೆ ಈರುಳ್ಳಿ ಕಟಾವು ಮಾಡಿಲ್ಲ.
‘ತೇವಾಂಶ ಹೆಚ್ಚಾಗಿ ರೋಗ ಕಾಣಿಸಿಕೊಂಡ ತಕ್ಷಣದಿಂದ ನಾಲ್ಕು ಬಾರಿ ಔಷಧಿ ಸಿಂಪಡಿಸಿರುವೆ. ಕೀಟಭಾದೆ ಹತೋಟಿಗೆ ಬರಲಿಲ್ಲ. ಕಟಾವು ಮಾಡಿದರೆ ಮಾಡಿದ ಖರ್ಚು ಭರಿಸಲು ಆಗುವುದಿಲ್ಲ, ಹಾಗಾಗಿ ಬೆಳೆಯನ್ನೆ ನಾಶಪಡಿಸುವ ಬಗ್ಗೆ ಚಿಂತಿಸುತ್ತಿರುವೆ’ ಎಂದು ರೈತ ಕರಿಬಸಪ್ಪ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಮುಂದಾಗಿ, ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು ಎಂದು ಚಿಗಟೇರಿ ಗ್ರಾಮದ ವಿನಯ್ ಒತ್ತಾಯಿಸಿದರು. ಬೆಂಗಳೂರಿಗೆ ತೆರಳಿ ಈರುಳ್ಳಿ ಮಾರಾಟ ಮಾಡುವ ರೈತರಿಗೆ ಸಮೀಪದಲ್ಲಿ ಮಾರುಕಟ್ಟೆ ವ್ಯವಸ್ಥೆ ಆಗಬೇಕು, ಸರ್ಕಾರ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು ಎನ್ನುತ್ತಾರೆ ಈರುಳ್ಳಿ ಬೆಳೆಗಾರರು.
‘ಇನ್ನಷ್ಟು ನಷ್ಟ ಬೇಡ’
‘40 ರಿಂದ 45 ಸಾವಿರ ಹಣ ಖರ್ಚು ಮಾಡಿ ಒಂದುವರೆ ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೆ. ಈಗ ಕಟಾವಿಗೆ ಒಬ್ಬರಿಗೆ ₹ 500 ಹಣ ಸೈಜು ಮಾಡಿ ಅವುಗಳನ್ನು ಪಾಕೆಟ್‍ಗೆ ತುಂಬಿ ಬೆಂಗಳೂರಿಗೆ ತೆರಳಲು ಲಾರಿ ಬಾಡಿಗೆ ₹15ರಿಂದ ₹20 ಸಾವಿರ ಕೇಳುತ್ತಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿ ಬೆಂಬಲ ಬೆಲೆ ಸಿಗದಿದ್ದರೆ ನಷ್ಟ ಆಗುವುದನ್ನು ತಪ್ಪಿಸಲು ಕಟಾವಿ ಮಾಡಿಲ್ಲ’ ಎನ್ನುತ್ತಾರೆ ಚಿಗಟೇರಿಯ ರೈತ ಬಣಕಾರ ವೀರೇಶ. ಅವರಂತೆ ಇನ್ನೂ ಹಲವರು ಇದೇ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.