ADVERTISEMENT

ಹೊಸಪೇಟೆ: ಮೂರ್ತಿ ತಯಾರಕರ ಬದುಕು ಅಯೋಮಯ

ಮೂರು ತಿಂಗಳಿಂದ ನಗರದಲ್ಲಿ ಸಿಲುಕಿರುವ ಹೊರರಾಜ್ಯದ ಕಲಾವಿದರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 14:23 IST
Last Updated 6 ಜೂನ್ 2021, 14:23 IST
ಹೊಸಪೇಟೆಯಲ್ಲಿ ಮೂರ್ತಿ ತಯಾರಿಸಲು ಬಂದು, ಇಲ್ಲಿಯೇ ಸಿಲುಕಿಕೊಂಡಿರುವ ಪಶ್ಚಿಮ ಬಂಗಾಳದ ಕಲಾವಿದರು
ಹೊಸಪೇಟೆಯಲ್ಲಿ ಮೂರ್ತಿ ತಯಾರಿಸಲು ಬಂದು, ಇಲ್ಲಿಯೇ ಸಿಲುಕಿಕೊಂಡಿರುವ ಪಶ್ಚಿಮ ಬಂಗಾಳದ ಕಲಾವಿದರು   

ಹೊಸಪೇಟೆ (ವಿಜಯನಗರ): ಮಣ್ಣಿನಿಂದ ದೇವರ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಅದರಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ ಅನ್ಯರಾಜ್ಯದ ಕಲಾವಿದರು, ಕಾರ್ಮಿಕರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣಗಢ ಜಿಲ್ಲೆಯ ಶಾಂತಿಪುರದ ಮಾಧೈ ಪಾಲ್‌ ಹಾಗೂ ಅವರೊಂದಿಗೆ ಬಂದಿರುವ ಹತ್ತು ಜನರು ಊರಿಗೆ ಹಿಂತಿರುಗಲಾಗದೆ ಕಷ್ಟದಲ್ಲಿ ಪೇಚಾಡುತ್ತಿದ್ದಾರೆ.

ಸತತ ಇಪ್ಪತ್ತು ವರ್ಷಗಳಿಂದ ನಗರಕ್ಕೆ ಬರುತ್ತಿರುವ ಇವರು, ಗಣೇಶ ಚತುರ್ಥಿಗೂ ಮುನ್ನ ನಗರಕ್ಕೆ ಬಂದು ಗಣಪನ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಊರಿಗೆ ವಾಪಸಾಗುತ್ತಾರೆ. ಲಾಕ್‌ಡೌನ್‌ನಿಂದ ಹೋದ ವರ್ಷ ಕೋಲ್ಕತ್ತದಲ್ಲಿ ಹೇಳಿಕೊಳ್ಳುವಂತಹ ಕೆಲಸ ಸಿಗಲಿಲ್ಲ. ಹೀಗಾಗಿ ಮುಂಚಿತವಾಗಿಯೇ ಕೆಲಸ ಆರಂಭಿಸಿ, ನಷ್ಟ ಸರಿದೂಗಿಸಿಕೊಳ್ಳಬೇಕೆಂಬ ಯೋಚನೆಯಿಂದ ಮೂರು ತಿಂಗಳ ಹಿಂದೆಯೇ ಇಲ್ಲಿಗೆ ಬಂದಿದ್ದಾರೆ. ಆದರೆ, ಇದೀಗ ಇಲ್ಲೂ ಲಾಕ್‌ಡೌನ್‌ ಇರುವುದರಿಂದ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.

ADVERTISEMENT

ನಗರದ ಸಂಡೂರು ರಸ್ತೆಯಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿರುವ ಇವರಿಗೆ ಮೂರ್ತಿ ತಯಾರಿಸಲು ಬೇಕಿರುವ ಮಣ್ಣು, ಒಣಹುಲ್ಲು, ಬಿದಿರು, ದಿನಸಿಗೂ ಹಣವಿಲ್ಲ. ನಗರದಲ್ಲಿ ಸುಮಾರು ವರ್ಷಗಳಿಂದ ಪರಿಚಯವಿರುವವರ ಬಳಿ ಕೈಸಾಲ ಪಡೆದು, ಸದ್ಯ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

‘ನಗರದಲ್ಲಿ ಗಣೇಶನ ಮೂರ್ತಿ ಮಾಡುತ್ತೇವೆ. ಕೋಲ್ಕತ್ತದಲ್ಲಿ ದುರ್ಗಾದೇವಿ ತಯಾರಿಸಿ, ಅದರಿಂದ ಬರುವ ಹಣದಿಂದ ವರ್ಷವಿಡೀ ಕುಟುಂಬ ನಡೆಸುತ್ತೇವೆ. ಆದರೆ, ಕೊರೊನಾ ಎಲ್ಲ ಕಸಿದುಕೊಂಡಿದೆ. ನಾವು ಹತ್ತು ಜನರಿದ್ದು, ನಿತ್ಯ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಮಾಧೈ ಪಾಲ್‌ ಗೋಳು ತೋಡಿಕೊಂಡಿದ್ದಾರೆ.

‘ಈ ವರ್ಷ ಗಣೇಶ ಉತ್ಸವಕ್ಕೂ ಮುನ್ನ ಪರಿಸ್ಥಿತಿ ಸರಿಹೋದರೆ ನಾವು ತಯಾರಿಸುತ್ತಿರುವ ಗಣಪನ ಮೂರ್ತಿಗಳು ಮಾರಾಟವಾಗಿ, ಸ್ವಲ್ಪ ಹಣ ಸಿಗಬಹುದು. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ತಾಪೋಸ್‌ ಎಂಬುವರು ಆಕಾಶದ ಕಡೆಗೆ ನೋಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.