
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ರಾಜ್ಯದಲ್ಲಿ ಬಣ್ಣದ ಕೊಕ್ಕರೆಗಳು (ಪೇಂಟೆಡ್ ಸ್ಟಾರ್ಕ್) ಅತ್ಯಧಿಕ ಸಂಖ್ಯೆಯಲ್ಲಿ ಇರುವ ತಾಣ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ ಎಂದು ನಂಬಲಾಗಿದ್ದು, ಇಲ್ಲಿ ಇದೀಗ ಸಾಮೂಹಿಕವಾಗಿ ಜೋಗುಳ ಹಾಡಲು ಎಲ್ಲ ಸಿದ್ಧತೆಗಳು ನಡೆದಿವೆ.
ಪರಸ್ಪರ ಕೊಕ್ಕಿನ ಕೋಲಾಟದ ಟಕಟಕ ಶಬ್ದವೇ ಬಣ್ಣದ ಕೊಕ್ಕರೆಗಳ ಸಂವಹನ ಭಾಷೆಯಾಗಿದೆ. ಪಕ್ಷಿಧಾಮದ ಕರಿಜಾಲಿ ಮರಗಳಲ್ಲಿ, ಕೃತಕವಾಗಿ ನಿರ್ಮಿಸಿದ ನಡುಗಡ್ಡೆಗಳಲ್ಲಿ ಗುಂಪುಗುಂಪಾಗಿ ಗೂಡು ಕಟ್ಟಿ ಸಂತಾನೋತ್ಪಿಗೆ ಅಣಿಯಾಗಿವೆ. ಮೊಟ್ಟೆಗಳನ್ನಿಟ್ಟು ವಂಶವೃದ್ಧಿಸಿಕೊಳ್ಳಲು, ತಮ್ಮ ಸಂಖ್ಯೆಯನ್ನು ದುಪ್ಪಟ್ಟು ಮಾಡಿಕೊಳ್ಳಲು ಎಲ್ಲ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿವೆ.
ಪಕ್ಷಿಧಾಮದಲ್ಲಿರುವ ಗಿಡಮರಗಳಲ್ಲಿ ದೊರೆಯುವ ಕಟ್ಟಿಗೆಗಳಿಂದ 500ಕ್ಕೂ ಹೆಚ್ಚು ಗೂಡುಗಳನ್ನು ಕೊಕ್ಕರೆಗಳೇ ನಿರ್ಮಿಸಿಕೊಂಡಿವೆ. ತಮ್ಮ ಬೆಚ್ಚನೆಯ ಮನೆಗಳನ್ನು ನಿರ್ಮಿಸುವ ಅವುಗಳ ಸ್ವಾವಲಂಬಿ ಬದುಕನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಗೂಡುಗಳಲ್ಲಿ 2ರಿಂದ 3 ಮೊಟ್ಟೆಗಳನ್ನಿಟ್ಟು ಗಂಡು ಮತ್ತು ಹೆಣ್ಣು ಎರಡೂ ಸೇರಿ 21ರಿಂದ 25 ದಿನಗಳ ವರೆಗೆ ಕಾವು ನೀಡಿ ಮರಿ ಮಾಡುತ್ತವೆ. ಬಳಿಕ ಮರಿಗಳನ್ನು ಜತನ ಮಾಡುತ್ತವೆ.
244.4 ಎಕರೆ ವಿಸ್ತಾರದ ಪಕ್ಷಿಧಾಮಕ್ಕೆ ಚಳಿಗಾಲದಲ್ಲಿ ಪ್ರತಿವರ್ಷ ದೇಶ ವಿದೇಶ ಪಕ್ಷಿಗಳು ಆಹಾರ ಅರಸಿ ವಲಸೆ ಬರುತ್ತವೆ. ಚಳಿಗಾಲ ಕಳೆದ ಬಳಿಕ ಮತ್ತೆ ಬೇರೆಡೆಗೆ ತೆರಳುತ್ತವೆ. ಆದರೆ ಪೇಂಟೆಡ್ ಸ್ಟಾರ್ಕ್ ಪಕ್ಷಿಗಳು ಇಲ್ಲಿಯೇ ಬೀಡು ಬಿಟ್ಟು ಬದುಕನ್ನು ಕಂಡುಕೊಂಡಿವೆ. ಪ್ರತಿವರ್ಷ ಸಂತಾನೋತ್ಪತ್ತಿ ಮೂಲಕ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಇವುಗಳಿಗೆ ಕೆರೆಯಲ್ಲಿ ದೊರೆಯುವ ಮೀನಿನ ಮರಿಗಳೇ ಮೃಷ್ಟಾನ್ನ. ಕೂಗಳತೆ ಅಂತರದಲ್ಲಿರುವ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಸಹ ಭೋಜನಕ್ಕೆ ಕೊರತೆಯೇನೂ ಇಲ್ಲ.
ಬಣ್ಣದ ಕೊಕ್ಕರೆಗಳು ಜನವರಿಯಲ್ಲಿ ಗೂಡು ನಿರ್ಮಿಸಿ ಫೆಬ್ರುವರಿ ತಿಂಗಳಲ್ಲಿ ಮೊಟ್ಟೆ ಇಡುತ್ತವೆ. ಕಾವು ಕೊಡಲು ಆರಂಭಿಸಿ ಮಾರ್ಚ್ ತಿಂಗಳಲ್ಲಿ ಮರಿ ಮಾಡುತ್ತವೆ. ಆಗಸ್ಟ್ ತಿಂಗಳವರೆಗೂ ಪೋಷಣೆ ಮಾಡುತ್ತವೆ.
ಪಕ್ಷಿಧಾಮದ ನಡುಗಡ್ಡೆಯ ಮರಗಳಲ್ಲಿ ಎಲ್ಲಿ ನೋಡಿದರೂ ಈಗ ಬಣ್ಣದ ಕೊಕ್ಕರೆಗಳ ಮನೆಗಳೇ (ಗೂಡುಗಳು) ಕಾಣುತ್ತಿವೆ. ಅಲ್ಲಿಯೇ ಮೊಟ್ಟೆಗಳನ್ನಿಡಲು ಆರಂಭಿಸಿ ಮರಿಗಳನ್ನು ಜತನ ಮಾಡುತ್ತವೆ. ಇವುಗಳ ಜೀವನ ಚಕ್ರವನ್ನು ವೀಕ್ಷಿಸಲು ರಾಜ್ಯದ ವಿವಿಧ ಕಡೆಗಳಿಂದ ಪಕ್ಷಿಪ್ರೇಮಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬಣ್ಣದ ಕೊಕ್ಕರೆಗಳಿಗೆ ಅಂಕಸಮುದ್ರವೇ ಖಾಯಂ ಮನೆ ಗಂಡು, ಹೆಣ್ಣು ಎರಡರಿಂದಲೂ ಮೊಟ್ಟೆಗಳಿಗೆ ಕಾವು ರಾಜ್ಯದ ಪಕ್ಷಿಧಾಮಗಳ ಪೈಕಿ ಇಲ್ಲಿಯೇ ಅಧಿಕ ಇರುವ ಸಾಧ್ಯತೆ
ಅಂಕಸಮುದ್ರ ಪಕ್ಷಿಧಾಮದಲ್ಲಿ ಪೇಂಟೆಡ್ ಸ್ಟಾರ್ಕ್ ಪಕ್ಷಿಗಳನ್ನು ನೋಡುವುದೇ ಚೆಂದ ಕೇವಲ ರಂಗನತಿಟ್ಟು ಪ್ರದೇಶದಲ್ಲಿ ನೋಡಿದ್ದ ನಾನು ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೋಡಿದ್ದೇನೆ ಪ್ರತಿ ವರ್ಷ ಇಲ್ಲಿಗೆ ಬರುತ್ತಿದ್ದೇನೆಪ್ರೇಮ್ಜಿತ್ ರಾವ್ ಪಕ್ಷಿ ವೀಕ್ಷಕ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.