ಅರಸೀಕೆರೆ: ಗ್ರಾಮದ ಜನಪ‍್ರಿಯ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ (76) ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪುತ್ರ, ಪ್ರಾಂಶುಪಾಲ ಪೂಜಾರ್ ದುರುಗೇಶ್ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಪೂಜಾರ್ ಚಂದ್ರಪ್ಪ ಕೇವಲ ಎರಡನೇ ತರಗತಿ ಓದಿದ್ದರೂ ರಂಗಭೂಮಿ ಮತ್ತು ಸಂಗೀತದ ಅಪಾರ ಆಸಕ್ತಿ ಹೊಂದಿದ್ದರು. ‘ದಂಡಿನ ದುರ್ಗಮ್ಮ’ (ದುರ್ಗಮಾತಾ ಅವತಾರ) ನಾಟಕದಲ್ಲಿ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿದ್ದರು. ಜನಪ್ರಿಯತೆ ಗಳಿಸಿದ ನಾಟಕವು ರಾಜ್ಯದ ವಿವಿಧೆಡೆಗಳಲ್ಲಿ 267 ಪ್ರದರ್ಶನ ಕಂಡಿದೆ.
ಅಲ್ಲದೆ, ‘ಜಗಜ್ಯೋತಿ ಬಸವೇಶ್ವರ’, ‘ದುರ್ಗದ ದೊರೆ ಅರ್ಥಾತ್ ರಾಜ್ಯದಲ್ಲಿ ಗಂಡುಗಲಿ’ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
‘ಕೊಂಡು ತಂದ ಗಂಡ’, ‘ಹೆಜ್ಜೆ ತಪ್ಪದ ಹೆಣ್ಣು’, ‘ಗಂಡನ ಮಾನ’, ‘ಪತಿ ಭಕ್ತ’ ಸೇರಿದಂತೆ ಅನೇಕ ನಾಟಕದ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದರು.
ರಂಗಭೂಮಿಯಲ್ಲಿ ಇವರ ಸೇವೆಯನ್ನು ಕಂಡು 2017ರಲ್ಲಿ ‘ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಲ್ಲದೆ, ‘ಗ್ರಾಮೀಣ ಸಿರಿ’, ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಗ್ರಾಮೀಣ ರಂಗ ಹಬ್ಬ’, ‘ಶ್ರೀ ಜಯದೇವ ಗೌರವ ಪುರಸ್ಕಾರ’, ‘ಪಂಚಮ ಶ್ರೀ’ ಸೇರಿದಂತೆ 20ಕ್ಕೂ ಅಧಿಕ ಪ್ರಶಸ್ತಿಗಳು ಅವರಿಗೆ ದೊರೆತಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಮನ್ನಣೆ ಗಳಿಸಿದ್ದ ಅವರು ತಾಲ್ಲೂಕು ಪಂಚಾಯಿತಿ ಸದಸ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಪೂಜಾರ್ ಚಂದ್ರಪ್ಪ ಕುರಿತ ‘ಬಣ್ಣ ಮತ್ತು ಬದುಕು’ ಎಂಬ ಅಭಿನಂದನ ಗ್ರಂಥ ರಚನೆಯಾಗಿದೆ.
ಪತ್ರ: ಪೂಜಾರ್ ಚಂದ್ರಪ್ಪ ಹದಿನೈದು ದಿನಗಳ ಹಿಂದೆ ಸ್ನೇಹಿತರಿಗೆ, ಮುಖಂಡರಿಗೆ ಪತ್ರ ಬರೆದಿದ್ದರು. ‘ಕಾಲ ಸನ್ನಿಹಿತವಾಗಿದ್ದು, ಕುಟುಂಬವನ್ನು ಸಾಮಾಜಿಕವಾಗಿ ಮುಂದೆ ಕೊಂಡೊಯ್ಯಬೇಕು’ ಎಂದು ಪತ್ರದಲ್ಲಿ ಬರೆದಿದ್ದರು.
ಬುಧವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ಪೂಜಾರ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಪೂಜಾರ್ ಚಂದ್ರಪ್ಪ ಅವರ ಪುತ್ರ ಪೂಜಾರ್ ದುರುಗೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.