ADVERTISEMENT

ನವೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣ ಉದ್ಘಾಟನೆ ನಾಳೆ

ನಿಲ್ದಾಣಕ್ಕೆ ಹಂಪಿ ವಾಸ್ತುಶಿಲ್ಪದ ಸ್ಪರ್ಶ; ವರ್ಚುವಲ್‌ ಮೂಲಕ ಪ್ರಧಾನಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:37 IST
Last Updated 11 ಮಾರ್ಚ್ 2023, 14:37 IST
   

ಹೊಸಪೇಟೆ (ವಿಜಯನಗರ): ಹಲವು ತಿಂಗಳ ಹಿಂದೆ ಕೆಲಸ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತಗೊಂಡಿರುವ ನಗರದ ನವೀಕರಣಗೊಂಡ ಹಂಪಿ ವಾಸ್ತುಶಿಲ್ಪ ಮಾದರಿಯ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ (ಮಾ.12) ಧಾರವಾಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವರ್ಚುವಲ್‌ ಮೂಲಕ ಉದ್ಘಾಟಿಸುವರು.

ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ರೈಲ್ವೆ ಸಚಿವಾಲಯದ ಸಹಭಾಗಿತ್ವದಲ್ಲಿ ₹13.5 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಹಂಪಿ ವಾಸ್ತುಶಿಲ್ಪ ಹೋಲುವಂತೆ ಪಾರಂಪರಿಕ ಸ್ಪರ್ಶ ನೀಡಿರುವುದು ವಿಶೇಷ.

ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಥೇಟ್‌ ಹಂಪಿ ಕಲ್ಲಿನ ರಥದಂತೆ ಭಾಸವಾಗುತ್ತದೆ. ಗೋಡೆಗಳ ಮೇಲೆಲ್ಲಾ ಹಂಪಿಯಲ್ಲಿರುವ ವಾಸ್ತುಶಿಲ್ಪಗಳಂತೆ ಕೆತ್ತನೆ ಮಾಡಲಾಗಿದೆ. ಉಗ್ರನರಸಿಂಹ, ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ, ವಿಜಯನಗರ ಸಾಮ್ರಾಜ್ಯ ಕಾಲದ ನಾಣ್ಯಗಳು, ಅವರ ಲಾಂಛನಗಳನ್ನು ಉಬ್ಬು ಶಿಲ್ಪದಲ್ಲಿ ಕೆತ್ತನೆ ಮಾಡಿರುವುದು ವಿಶೇಷ.

ADVERTISEMENT

ಟಿಕೆಟ್‌ ಕೌಂಟರ್‌, ರಿಟೈರಿಂಗ್‌ ರೂಂ, ಒಳ ಆವರಣ, ನಿಲ್ದಾಣ ಎದುರಿನ ಪ್ರದೇಶ, ಪಾರ್ಕಿಂಗ್‌ ಸ್ಥಳವನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದಿಗಿಂತ ಹೆಚ್ಚು ವಾಹನಗಳ ನಿಲುಗಡೆಗೆ ವ್ಯವಸ್ಥೆಗೆ ಮಾಡಲಾಗಿದೆ. ಪ್ರವೇಶ ದ್ವಾರದ ಸಮೀಪದಲ್ಲಿ 100 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗಿದೆ.

ನೆಲಮಹಡಿ, ಮೊದಲ ಮಹಡಿ, ಎಕ್ಸಿಕ್ಯೂಟಿವ್‌ ಲಾಂಜ್‌, ರಿಟೈರಿಂಗ್ ರೂಂ, ಫುಡ್‌ ಪ್ಲಾಜಾ ನಿರ್ಮಿಸಲಾಗಿದೆ. ಪ್ರಯಾಣಿಕರ ವಿಶ್ರಾಂತಿಗಾಗಿ 14 ಕೊಠಡಿಗಳನ್ನು ನಿರ್ಮಿಸಲಾಗಿದೆ. ಗಣ್ಯರ ನಿರೀಕ್ಷಣ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ, ಕ್ಯಾಂಟೀನ್‌ ಕೂಡ ಇದೆ.

ಐಪಿಐಎಸ್‌ ಜಾರಿ: ರೈಲು ನಿಲ್ದಾಣದಲ್ಲಿ ‘ಇಂಟಿಗ್ರೇಟೆಡ್‌ ಪ್ಯಾಸೆಂಜರ್‌ ಇನ್‌ಫಾರ್ಮೆಶನ್‌ ಸಿಸ್ಟಮ್‌’ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದೆ. ಈ ವ್ಯವಸ್ಥೆಯಿಂದಾಗಿ ರೈಲಿನ ಆಗಮನ, ನಿರ್ಗಮನ, ಪ್ಲಾಟ್‌ಫಾರಂ ಸಂಖ್ಯೆ, ರೈಲು ಕೋಚಿನ ನಿರ್ದಿಷ್ಟ ಸ್ಥಳವನ್ನು ತಿಳಿದುಕೊಳ್ಳಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನಿಲ್ದಾಣದ 1, 2 ಮತ್ತು 3ನೇ ಪ್ಲಾಟ್‌ಫಾರಂನಲ್ಲಿ ಎಲೆಕ್ಟ್ರಾನಿಕ್‌ ಮಾರ್ಗದರ್ಶಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅದರ ಮೇಲಿನ ವಿವರ ನೋಡಿಕೊಂಡು ಪ್ರಯಾಣಿಕರು ನಿರ್ದಿಷ್ಟ ಸಂಖ್ಯೆಯ ಪ್ಲಾಟ್‌ಫಾರಂಗೆ ಸೂಕ್ತ ಸಮಯಕ್ಕೆ ತಲುಪಬಹುದು.

ನಿಲ್ದಾಣದ ಸೂಚನಾ ಫಲಕಗಳಲ್ಲಿ ಬರುವ ಮಾಹಿತಿಯೂ ‘ನ್ಯಾಷನಲ್‌ ಟ್ರೇನ್‌ ಇನ್‌ಕ್ವಾಯಿರಿ ಸಿಸ್ಟಮ್‌‘ (ಎನ್‌ಟಿಎಎಸ್‌) ಆ್ಯಪ್‌ನೊಂದಿಗೆ ಲಿಂಕ್‌ ಮಾಡಲಾಗಿದೆ. ನಿಲ್ದಾಣದ ಕ್ಷಣ ಕ್ಷಣದ ಮಾಹಿತಿಯನ್ನು ಆ್ಯಪ್‌ನಲ್ಲಿ ನೋಡಬಹುದು.

ಪ್ಲಾಟ್‌ಫಾರಂ ಮೇಲ್ದರ್ಜೆಗೆ: ಸರಕು ಮತ್ತು ಪ್ರಯಾಣಿಕ ರೈಲುಗಳು ಹೆಚ್ಚಾಗಿ ಓಡಾಡುವುದರಿಂದ ನಿಲ್ದಾಣದ ಪ್ಲಾಟ್‌ಫಾರಂ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಕೋವಿಡ್‌ ಲಾಕ್‌ಡೌನ್‌ನಲ್ಲಿ ಹಳಿಗಳನ್ನು ಬದಲಿಸಿ, ಹೊಸ ಸ್ಲೀಪರ್ಸ್‌ ಅಳವಡಿಸಲಾಗಿದೆ. ಇಡೀ ಆವರಣದಲ್ಲೆಲ್ಲಾ ಡಸ್ಟ್‌ ಬೀನ್‌ಗಳಿಗೆ ವ್ಯವಸ್ಥೆ ಮಾಡಿ ಸ್ವಚ್ಛತೆಗೆ ಒತ್ತು ಕೊಡಲಾಗಿದೆ. ಸ್ವಚ್ಛ, ಸುಂದರ ನಿಲ್ದಾಣವಾಗಿ ಕಂಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.