ADVERTISEMENT

ಕಾನೂನು ಸುವ್ಯವಸ್ಥೆ ಬಲವಾಗಿದ್ದರೆ ಆಡಳಿತ ಬಲ: ಡಿವೈಎಸ್ಪಿ ಕೆ.ಪಿ.ರವಿಕುಮಾರ್

ಪೊಲೀಸ್ ಧ್ವಜ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 8:37 IST
Last Updated 2 ಏಪ್ರಿಲ್ 2022, 8:37 IST
   

ಹೊಸಪೇಟೆ (ವಿಜಯನಗರ): ‘ಕಾನೂನು ಸುವ್ಯವಸ್ಥೆ ಬಲವಾಗಿದ್ದರೆ ಆಡಳಿತ ಕೂಡ ಬಲವಾಗಿರುತ್ತದೆ’ ಎಂದು ಲೋಕಾಯುಕ್ತ ನಿವೃತ್ತ ಡಿವೈಎಸ್ಪಿ ಕೆ.ಪಿ.ರವಿಕುಮಾರ್ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊದಲ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

‘ಪೊಲೀಸ್ ಇಲಾಖೆಯ ಪ್ರತಿ ಸಿಬ್ಬಂದಿಗೂ ಕಾನೂನು ಪಾಲನೆಯ ಗುರುತರ ಜವಾಬ್ದಾರಿ ಇರುತ್ತದೆ. ಒಬ್ಬರ ತಪ್ಪಿಗೆ ಇಡೀ ಇಲಾಖೆಯ ಮೇಲೆ ಗೂಬೆ ಕೂರಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರದಿಂದ ಕೆಲಸ ನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಇಲಾಖೆಯಲ್ಲಿ ಸಿಬ್ಬಂದಿ ಬಹಳ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ವಾರದ ರಜೆ ಕೊಡುವುದು ಅಸಾಧ್ಯವಾಗಿದೆ. ಆದರೆ, ಎ‌ಸ್ಪಿ ಡಾ.ಅರುಣ್‌ ಅವರು ಸಿಬ್ಬಂದಿಗೆ ವಾರದ ರಜೆ ಘೋಷಿಸಿರುವುದು ಶ್ಲಾಘನೀಯ. ನಿವೃತ್ತ ಅಧಿಕಾರಿಗಳಿಗೆ ಸೂಕ್ತ ಕಟ್ಟಡವಿಲ್ಲ. ನಿವೃತ್ತ ನೌಕರರಿಗೆ ಕಟ್ಟಡದ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಕ್ಯಾಂಟೀನ್, ಕಲ್ಯಾಣ ಕೇಂದ್ರ ನಿರ್ಮಿಸಿಕೊಡಬೇಕು’ ಎಂದರು.

‘ಹೊಸಪೇಟೆಯ ಇದೇ ಮೈದಾನದಲ್ಲಿ ದೈಹಿಕ ಪರೀಕ್ಷೆಗೆ ಬಂದು ಪಿ.ಸಿಯಾಗಿ ಆಯ್ಕೆಯಾಗಿದ್ದೆ. ಚಿತ್ತವಾಡ್ಗಿ ಠಾಣೆಯಲ್ಲಿ ಸೇವೆ ಸಲ್ಲಿಸುವಾಗ ಗೌರವ ವಂದನೆ ನೀಡಿದ್ದೆ‌. ಇದೀಗ ಇದೇ ಸ್ಥಳದಲ್ಲಿ ಗೌರವ ವಂದನೆ ಸ್ವೀಕರಿಸುತ್ತಿರುವುದು ಖುಷಿಯ ವಿಚಾರ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾತನಾಡಿ, ನೂತನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳ ಸಹಾಯ ನಿಧಿಗೆ ಹಣ ಸಂಗ್ರಹಿಸಿ ಅಧಿಕಾರಿಗಳ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದು ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.