ADVERTISEMENT

ಸಾಧನಾ ಸಮಾವೇಶಕ್ಕೆ ಭರದಿಂದ ಸಾಗಿದ ಪೆಂಡಾಲ್‌ ನಿರ್ಮಾಣ ಕಾರ್ಯ

ಸತತ 2ನೇ ದಿನವೂ ಸಚಿವ ಜಮೀರ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 9:56 IST
Last Updated 14 ಮೇ 2025, 9:56 IST
   

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಎರಡು ವರ್ಷವನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ 20ರಂದು ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಪೆಂಡಾಲ್ ನಿರ್ಮಾಣ ಕೆಲಸಕ್ಕೆ ವೇಗ ಸಿಕ್ಕಿದೆ.

ಸತತ ಎರಡನೇ ದಿನವಾದ ಬುಧವಾರ ಸಹ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಅವರು ಕ್ರೀಡಾಂಗಣಕ್ಕೆ ತೆರಳಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ (405 ಅಡಿ) ಈ ಮೈದಾನದ ಮಧ್ಯಭಾಗದಲ್ಲಿದ್ದು, ಅದು ಇದ್ದಂತೆಯೇ ಅದನ್ನೂ ಒಳಗೊಂಡು ಇಡೀ ಮೈದಾನಕ್ಕೆ ಪೆಂಡಾಲ್‌ ಅಳವಡಿಸಲಾಗುತ್ತಿದೆ. 19 ಎಕರೆ ವಿಸ್ತೀರ್ಣದ ಈ ಮೈದಾನದಲ್ಲಿ ಗರಿಷ್ಠ ಒಂದೂವರೆಯಿಂದ ಎರಡು ಲಕ್ಷ ಜನ ಸೇರಬಹುದಾಗಿದ್ದು, ಕನಿಷ್ಠ ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯೊಂದಿಗೆ ಜರ್ಮನ್‌ ಟೆಂಟ್‌ ಮಾದರಿಯಲ್ಲಿ ಪೆಂಡಾಲ್ ನಿರ್ಮಾಣವಾಗಲಿದೆ. ಮೈದಾನದ ನಾಲ್ಕೂ ಕಡೆ ರಸ್ತೆಗಳಿದ್ದು, ಜನ ಹೆಚ್ಚು ಸೇರಿದರೆ ರಸ್ತೆಯಲ್ಲೇ ನಿಂತು ಕಾರ್ಯಕ್ರಮ ನೋಡುವುದಕ್ಕೂ ಅವಕಾಶ ಸಿಗಲಿದೆ. ಹೀಗಾಗಿ ಎರಡು ಲಕ್ಷಕ್ಕೂ ಅಧಿಕ ಮಂದಿ ಬಂದರೂ ಯಾವುದೇ ತೊಂದರೆ ಇಲ್ಲದೆ ಕಾರ್ಯಕ್ರಮ ವೀಕ್ಷಿಸುವುದಕ್ಕೆ ಇಲ್ಲಿ ಅವಕಾಶ ಇರಲಿದೆ ಎಂದು ಜಿಲ್ಲಾಡಳಿತದ ಮೂಲಗಳಿಂದ ತಿಳಿದುಬಂದಿದೆ.

ADVERTISEMENT

ಹೋಟೆಲ್‌ಗಳು ಭರ್ತಿ: ಹೊಸಪೇಟೆ ನಗರದಲ್ಲೇ 1,600ಕ್ಕೂ ಅಧಿಕ ಹೋಟೆಲ್‌ ಕೊಠಡಿಗಳಿದ್ದು, ಅವುಗಳಲ್ಲಿ ಹೆಚ್ಚಿನವು ಮೇ 19, 20ರಂದು ಭರ್ತಿಯಾಗಿರುವ ಕುರಿತು ಮಾಹಿತಿ ಲಭಿಸಿದೆ. ಭದ್ರತಾ ಕಾರ್ಯಗಳಿಗಾಗಿ ಹಲವು ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ನಗರಕ್ಕೆ ಕರೆಸಲಾಗುತ್ತಿದ್ದು, ಅವರಿಗೆ ಸಹ ವಸತಿ ವ್ಯವಸ್ಥೆ ಕಲ್ಪಿಸಲು ತಯಾರಿಗಳು ನಡೆದಿವೆ.

ಇಂದಿರಾ ಗಾಂಧಿ ಕಟ್ಟೆಗೆ ಮರುಜೀವ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಹಿಂದೆ ನಗರಕ್ಕೆ ಭೇಟಿ ನೀಡಿದ್ದಾಗ ಈ ಮುನ್ಸಿಪಲ್ ಮೈದಾನದ ಕಟ್ಟೆಯಲ್ಲಿ ನಿಂತು ಭಾಷಣ ಮಾಡಿದ್ದರು. ಆ ಕಟ್ಟೆ ಈಗಲೂ  ಮೈದಾನದಲ್ಲಿದ್ದು, ಸದ್ಯ ಶಿಥಿಲಾವಸ್ಥೆಯಲ್ಲಿದೆ. ಅದಕ್ಕೆ ಮರುಜೀವ ನೀಡಿ, ಕಟ್ಟೆಯಲ್ಲಿ ಇಂದಿರಾ ಗಾಂಧಿ ಅವರ ಪುತ್ಥಳಿ ನಿರ್ಮಿಸುವ ತುರ್ತು ಯೋಜನೆ ರೂಪುಗೊಂಡಿದ್ದು, ಮೇ 20ರಂದು ರಾಹುಲ್ ಗಾಂಧಿ ಅವರಿಂದಲೇ ಪುತ್ಥಳಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.