
ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಪಕ್ಷಾತೀತವಾಗಿ ಶೇ 30ರಿಂದ 40ರಷ್ಟು ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಕೆಲವರು ನೇರವಾಗಿ ಶಾಮೀಲಾಗಿದ್ದಾರೆ. ಅದರ ಭಾಗವಾಗಿಯೇ ಶಿರಹಟ್ಟಿ ಶಾಸಕರು ಸಿಕ್ಕಿಬಿದ್ದಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ವೇಳೆ ಕಮಿಷನ್ ಪಡೆಯುವ ಕಾಲ ಹೋಗಿದೆ. ಕಾಮಗಾರಿ ಪೂಜೆಯ ಹಂತದಲ್ಲೇ ಶಾಸಕರಿಗೆ ಕಮಿಷನ್ ನೀಡಬೇಕು. ಅಧಿಕಾರಿಗಳು ಸಹ ಇದರಲ್ಲಿ ಮಧ್ಯವರ್ತಿಗಳಾಗಿದ್ದಾರೆ‘ ಎಂದು ದೂರಿದರು.
‘ಹಿಂದಿನ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಇತ್ತು, ಈ ಸರ್ಕಾರದಲ್ಲಿ ಶೇ 60ರಷ್ಟು ಕಮಿಷನ್ ದಂಧೆ ಇದೆ ಎಂದು ನಾನು ಹೇಳಿಲ್ಲ. ನನ್ನ ಮಾತು ತಿರುಚಲಾಗಿದೆ. ಆದರೆ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡಿದ್ದು ನಿಜ’ ಎಂದರು.
‘ಗುತ್ತಿಗೆದಾರರ ಬಾಕಿ ಇರುವ ಬಿಲ್ ಮೊತ್ತ ₹37 ಸಾವಿರ ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದಷ್ಟೇ ನಮ್ಮ ಬೇಡಿಕೆಯಾಗಿದೆ‘ ಎಂದು ಹೇಳಿದರು.
ಮಾರ್ಚ್ 6ಕ್ಕೆ ಮುಷ್ಕರ: ‘ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಿಂದ ಗುತ್ತಿಗೆದಾರರು ಭಾಗವಹಿಸಲಿದ್ದಾರೆ. ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಏಪ್ರಿಲ್‌ನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.