ADVERTISEMENT

ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಹೊಸಪೇಟೆಯಲ್ಲಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 14:01 IST
Last Updated 6 ಸೆಪ್ಟೆಂಬರ್ 2022, 14:01 IST
   

ಹೊಸಪೇಟೆ (ವಿಜಯನಗರ): ವಿದ್ಯುತ್‌ ಕ್ಷೇತ್ರದ ಖಾಸಗೀಕರಣ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ಚಳವಳಿ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಡಾ. ಪುನೀತ್‌ ರಾಜಕುಮಾರ್‌ ವೃತ್ತದವರೆಗೆ ಹಸಿರು ಧ್ವಜಗಳೊಂದಿಗೆ ರ್‍ಯಾಲಿ ನಡೆಸಿದ ನೂರಾರು ಕಾರ್ಯಕರ್ತರು, ನಂತರ ಬಸ್‌ ನಿಲ್ದಾಣ ರಸ್ತೆಗೆ ಅಡ್ಡಲಾಗಿ ಪ್ರತಿಭಟನೆಗೆ ಕುಳಿತರು. ಟೈರ್‌ ಸುಟ್ಟು, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. 11.15 ರಿಂದ ಮಧ್ಯಾಹ್ನ 2.45ರ ವರೆಗೆ ರಸ್ತೆತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, ‘ವಿದ್ಯುತ್‌ ಕ್ಷೇತ್ರದ ಖಾಸಗೀಕರಣದಿಂದ ರಾಜ್ಯದ 24 ಲಕ್ಷ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬೇಕಾಗುತ್ತದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಹುನ್ನಾರ ಇದರಲ್ಲಿದೆ. ಈ ನಿರ್ಧಾರ ಹಿಂಪಡೆಯುವವರೆಗೆ ಹೋರಾಟ ನಡೆಯಲಿದೆ. ಸೆ. 12ರಂದು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ADVERTISEMENT

ಮೂರು ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಯಾವ ರೀತಿಯ ಹೋರಾಟ ನಡೆಸಲಾಗಿತ್ತೋ ಅದೇ ರೀತಿಯ ಹೋರಾಟ ನಡೆಸಲಾಗುವುದು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿದರೆ ರೈತರು ಉಳಿಯುವುದಿಲ್ಲ. ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದ ಕಾರಣ ರೈತರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ರಸಗೊಬ್ಬರ, ಕೃಷಿ ಪರಿಕರಗಳ ಮೇಲೆ ಜಿ.ಎಸ್‌.ಟಿ. ಹಾಕಿರುವುದರಿಂದ ಅವುಗಳ ಬೆಲೆ ಭಾರಿ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಸತತವಾಗಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಇನ್ನೊಂದೆಡೆ ಕಾರ್ಪೊರೇಟ್‌ನವರ ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿ, ಅವರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಕೃಷಿ ಇಲಾಖೆಯ ಎಲ್ಲ ಸೌಲಭ್ಯಗಳು ಗ್ರಾಮೀಣರಿಗೆ ಸಿಗಬೇಕು. ಕಮಲಾಪುರ ಕೆರೆ ಒತ್ತುವರಿ ತೆರವುಗೊಳಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಸಬೇಕು. ಗೋಶಾಲೆ ಬದಲು ಗೋಮಾಳಕ್ಕೆ ಪ್ರೋತ್ಸಾಹ ಕೊಡಬೇಕು. ಸರ್ಕಾರಕ್ಕೆ ಸೇರಿದ 22 ಲಕ್ಷ ಎಕರೆ ಜಮೀನನ್ನು ಸಣ್ಣ, ಅತಿ ಸಣ್ಣ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಂಚಾಲಕರಾದ ಸಣ್ಣಕ್ಕಿ ರುದ್ರಪ್ಪ, ಟಿ. ನಾಗರಾಜ್‌, ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಜಿ. ಮಲ್ಲಿಕಾರ್ಜುನ, ಗೌರವ ಅಧ್ಯಕ್ಷ ತಾಯಪ್ಪ, ಉಪಾಧ್ಯಕ್ಷ ಹೇಮರೆಡ್ಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಹಾಂತೇಶ್‌, ರೇವಣಸಿದ್ದಪ್ಪ, ಗಾಳೆಪ್ಪ, ಕೊಟ್ರೇಶ್‌, ಅಯ್ಯಣ್ಣ, ಅಕ್ಬರ್‌, ನವೀನ್‌, ನವಾಜ್‌, ಎಲ್‌.ಎಸ್‌. ರುದ್ರಪ್ಪ, ಜಗನ್‌, ಜೆ.ಬಸವರಾಜ, ಬಿ. ಬಸವರಾಜ ಇದ್ದರು.

----

ಅಧಿವೇಶನದಲ್ಲಿ ಪ್ರಸ್ತಾಪ–ಎಂ.ಬಿ. ಪಾಟೀಲ
ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಂ.ಬಿ. ಪಾಟೀಲ ರೈತರ ಪ್ರತಿಭಟನಾ ಸ್ಥಳಕ್ಕೆ ಬಂದು, ‘ಉಚಿತ ವಿದ್ಯುತ್‌ ಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ವಿದ್ಯುತ್‌ ಪೂರೈಕೆಯೇ ಸರಿಯಾಗಿ ಇಲ್ಲ. ಸಿದ್ದರಾಮಯ್ಯನವರು ಸಿ.ಎಂ. ಇದ್ದಾಗ ₹8,100 ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುತ್ತಿರುವ ವಿಷಯವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ, ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ನಮ್ಮ ಪಕ್ಷ ರೈತರೊಂದಿಗೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.