
ಹಗರಿಬೊಮ್ಮನಹಳ್ಳಿ: ‘ವಿಧಾನಸಭಾ ಕ್ಷೇತ್ರದಲ್ಲಿರುವ ಪಟ್ಟಣ, ಕೊಟ್ಟೂರು ಮತ್ತು ಮರಿಯಮ್ಮನಹಳ್ಳಿ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ವಿಶ್ವಾಸವಿದೆ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣಕ್ಕೆ ಜ.4ರಂದು ರೈಲ್ವೆ ಸಚಿವ ವಿ.ಸೋಮಣ್ಣ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಪೂರ್ವ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು.
‘ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಇನ್ನೂ ಹಲವು ರೈಲುಗಳನ್ನು ಈ ಮಾರ್ಗದಲ್ಲಿ ಓಡಿಸುವ ಕುರಿತು ಸಚಿವರ ಗಮನ ಸೆಳೆಯಲಾಗುವುದು’ ಎಂದು ತಿಳಿಸಿದರು.
‘ಸಚಿವರು ಹೊಸ ಆನಂದೇವನಹಳ್ಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಟ್ಟಣದ ರಾಮನಗರ ಬಸ್ ನಿಲ್ದಾಣ ಹಾಗೂ ನೇತಾಜಿ ರಸ್ತೆಯಲ್ಲಿರುವ ರೈಲ್ವೆ ಗೇಟ್‍ಗಳ ಸಮಸ್ಯೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿ ಶೀಘ್ರ ಅನುದಾನ ನೀಡಿ ಮೇಲ್ಸೇತುವೆ ಕಾಮಗಾರಿ ಆರಂಭಿಸುವಂತೆ ವಿನಂತಿಸಲಾಗುವುದು. ರೈಲ್ವೆ ಗೇಟ್ ಬಳಿ ಇರುವ ನಿವೇಶನದಲ್ಲಿ ಸಾರ್ವಜನಿಕ ಸಮಾರಂಭ ಏರ್ಪಡಿಸಲಾಗುವುದು, 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯರಾದ ಬಿ.ಗಂಗಾಧರ, ದೀಪಕ್ ಸಾ ಕಠಾರೆ, ನಾಗರಾಜ ಜನ್ನು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ಮುಖಂಡರಾದ ಬದಾಮಿ ಮೃತ್ಯುಂಜಯ, ಈ.ಕೃಷ್ಣಮೂರ್ತಿ, ಎನ್.ಕೃಷ್ಣಮೂರ್ತಿ, ಬುಲೆಟ್ ಬಸವರಾಜ, ನರೇಗಲ್ ಬಸವರಾಜ, ಜಿ.ಎಂ.ಜಗದೀಶ್, ಕೊಳ್ಳಿ ಪ್ರಕಾಶ್, ಭರಮಜ್ಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.