ADVERTISEMENT

ಮುಂಗಾರಿಗೂ ಮುನ್ನವೇ ಉತ್ತಮ ಮಳೆ: ಬೇಸಿಗೆಯಲ್ಲಿ ಎಲ್ಲೆಲ್ಲೂ ಹಸಿರು!

ನೀಗಿದ ಜಲಚರಗಳ ನೀರಿನ ಸಮಸ್ಯೆ; ವನ್ಯಜೀವಿಗಳಿಗೆ ಯಥೇಚ್ಛ ಆಹಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಮೇ 2021, 19:30 IST
Last Updated 18 ಮೇ 2021, 19:30 IST
ಹಸಿರು ಹೊದ್ದು ನಿಂತಿರುವ ತುಂಗಭದ್ರಾ ಜಲಾಶಯ ಸಮೀಪದ ವೈಕುಂಠ ಅತಿಥಿ ಗೃಹವಿರುವ ಗುಡ್ಡ–ಪ್ರಜಾವಾಣಿ ಚಿತ್ರ
ಹಸಿರು ಹೊದ್ದು ನಿಂತಿರುವ ತುಂಗಭದ್ರಾ ಜಲಾಶಯ ಸಮೀಪದ ವೈಕುಂಠ ಅತಿಥಿ ಗೃಹವಿರುವ ಗುಡ್ಡ–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮುಂಗಾರಿಗೂ ಮುನ್ನವೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಕಡು ಬೇಸಿಗೆಯಲ್ಲೇ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಹಚ್ಚ ಹಸಿರಾಗಿದೆ.

ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಕೆಂಡದಂತಹ ಬಿಸಿಲು, ಬಿಸಿ ಗಾಳಿ ಇರುತ್ತದೆ. ಸ್ವಲ್ಪ ಹೊರಗೆ ಹೋಗಿ ಬಂದರೂ ಆಯಾಸ, ಬಳಲಿಕೆ ಉಂಟಾಗುತ್ತದೆ. ಆದರೆ, ಈ ವರ್ಷ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಏಪ್ರಿಲ್‌ ಎರಡನೇ ವಾರದಿಂದ ಆಗಾಗ್ಗೆ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವ ಕಾರಣ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದೆ. ಚಂಡಮಾರುತದ ಪರಿಣಾಮ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ವಾತಾವರಣ ಮತ್ತಷ್ಟು ತಂಪಾಗಿದೆ. ಮೇ ಮೂರನೇ ವಾರ ಆರಂಭಗೊಂಡರೂ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ.

ಮಾರ್ಚ್‌, ಏಪ್ರಿಲ್‌ನಲ್ಲಿ ವಿಪರೀತ ಬಿಸಿಲಿನಿಂದ ಕೆಂಪಾಗಿದ್ದ ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳು ಈಗ ಹಸಿರು ಹೊದ್ದು ನಿಂತಿದ್ದು, ಅವುಗಳಿಗೆ ಜೀವ ಕಳೆ ಬಂದಿದೆ. ಗಿಡ, ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿವೆ. ನೀರಿಲ್ಲದೆ ಬಂಜರು ಭೂಮಿಯಂತಾಗಿದ್ದ ಬಯಲಿನಲ್ಲಿ ಯಥೇಚ್ಛವಾಗಿ ಹುಲ್ಲು ಬೆಳೆದಿದ್ದು, ಹಸಿರಿನ ಹೊದಿಕೆ ಹಾಸಿದಂತಾಗಿದೆ. ನಗರ ಸೇರಿದಂತೆ ಹಂಪಿ ಸ್ಮಾರಕದ ಪರಿಸರದಲ್ಲಿ ಒಣಗಿ ಹೋಗಿದ್ದ ಹೂದೋಟ, ಉದ್ಯಾನಗಳಿಗೆ ವಿಶೇಷ ಕಳೆ ಬಂದಿದೆ.

ADVERTISEMENT

ತುಂಗಭದ್ರಾ ಜಲಾಶಯಕ್ಕೆ ಹೊಂದಿಕೊಂಡಿರುವ ವೈಕುಂಠ ಅತಿಥಿಗೃಹ, ಇಂದ್ರಭವನ ಗುಡ್ಡ, ಗುಂಡಾ ಅರಣ್ಯ, ಜೋಳದರಾಶಿ ಗುಡ್ಡ, ನಗರದಿಂದ ಸಂಡೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿನ ಬೆಟ್ಟಗುಡ್ಡಗಳ ಹಸಿರಿನ ಚೆಲುವು ದಾರಿ ಹೋಕರನ್ನು ಆಕರ್ಷಿಸುತ್ತಿದೆ. ನಗರದ ಒಂದಿಡಿ ಭಾಗಕ್ಕೆ ಹಸಿರಿನ ಕೋಟೆ ಕಟ್ಟಿದಂತಾಗಿದೆ.

ಬೇಸಿಗೆ ಬಂತೆಂದರೆ ತುಂಗಭದ್ರಾ ನದಿಯಲ್ಲಿ ಅನೇಕ ಜಲಚರಗಳು ಸತ್ತು ಬೀಳುತ್ತವೆ. ತುಂಗಭದ್ರೆ ಬತ್ತಿ ಹೋಗುವ ಸ್ಥಿತಿಗೆ ಬಂದಾಗ ಮಳೆ ಬಂದದ್ದರಿಂದ ಆತಂಕ ದೂರವಾಗಿದೆ. ನೀರುನಾಯಿ, ಮೊಸಳೆ, ಮೀನು, ಆಮೆ ಸೇರಿದಂತೆ ಇತರೆ ಜಲಚರಗಳಿಗೆ ಅನುಕೂಲವಾಗಿದೆ.

ಕಾಡುಗಳೆಲ್ಲ ಹಸಿರಾಗಿ, ಅಲ್ಲಲ್ಲಿ ನೀರು ನಿಂತುಕೊಂಡಿರುವುದರಿಂದ ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿಲ್ಲ. ಕಾರೆ, ಕವಳೆ, ಜಾನೆ ಸೇರಿದಂತೆ ಇತರೆ ಹಣ್ಣುಗಳು ಬೆಳೆದಿರುವುದರಿಂದ ಪಕ್ಷಿಗಳ ಆಹಾರ ಸಮಸ್ಯೆ ದೂರವಾಗಿದೆ. ನೆಲ ತಂಪಾಗಿರುವುದರಿಂದ ಅಂತರ್ಜಲವೂ ಪಾತಾಳಕ್ಕೆ ಹೋಗಿಲ್ಲ. ಹಿಂದಿನ ವರ್ಷದಂತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ.

‘ಬೇಸಿಗೆಯಲ್ಲಿ ಸಾಮಾನ್ಯವಾಗಿ ಒಂದೆರಡು ಸಲ ಮಳೆಯಾಗುತ್ತದೆ. ಆದರೆ, ಈ ಸಲ ಸ್ವಲ್ಪ ಜಾಸ್ತಿಯೇ ಆಗಿದೆ. ಸಹಜವಾಗಿಯೇ ಸುತ್ತಮುತ್ತಲಿನ ಪರಿಸರ ಹಸಿರಾಗಿದೆ. ನೀರಿಗೆ ಸಮಸ್ಯೆ ಆಗಿಲ್ಲ. ಜಲಚರ, ಪ್ರಾಣಿ ಪಕ್ಷಿ ಎಲ್ಲಕ್ಕೂ ಸಮೃದ್ಧವಾಗಿ ಆಹಾರ ಸಿಗುತ್ತಿದೆ’ ಎಂದು ಪರಿಸರ ತಜ್ಞ ಸಮದ್‌ ಕೊಟ್ಟೂರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.