ADVERTISEMENT

ಹಗರಿಬೊಮ್ಮನಹಳ್ಳಿ | ಒಂದೇ ಕಡೆ ಫಲಪುಷ್ಪ ಗಿಡಗಳ ‘ಶತ‘ ಪ್ರಭೇದ

ಹಗರಿಬೊಮ್ಮನಹಳ್ಳಿಯಲ್ಲೊಂದು ವಿಶಿಷ್ಟ ಸಸ್ಯೋದ್ಯಾನ

ಸಿ.ಶಿವಾನಂದ
Published 30 ಜುಲೈ 2025, 4:35 IST
Last Updated 30 ಜುಲೈ 2025, 4:35 IST
ಹಗರಿಬೊಮ್ಮನಹಳ್ಳಿಯಲ್ಲಿಯ 1ನೇವಾರ್ಡ್‍ನಲ್ಲಿರುವ ಸಸ್ಯೋದ್ಯಾನ(ಬಟಾನಿಕಲ್ ಗಾರ್ಡನ್)
ಹಗರಿಬೊಮ್ಮನಹಳ್ಳಿಯಲ್ಲಿಯ 1ನೇವಾರ್ಡ್‍ನಲ್ಲಿರುವ ಸಸ್ಯೋದ್ಯಾನ(ಬಟಾನಿಕಲ್ ಗಾರ್ಡನ್)   

ಹಗರಿಬೊಮ್ಮನಹಳ್ಳಿ: ಅಳಿವಿನ ಅಂಚಿನಲ್ಲಿರುವ ಅಪರೂಪದ ಹೂವು ಮತ್ತು ಹಣ್ಣಿನ ಗಿಡಗಳ ಸಮೂಹವೇ ಇಲ್ಲಿದೆ. ಸಸ್ಯಗಳ ಜೀವಜಲದ ಕೊಂಡಿಯನ್ನು ಇಲ್ಲಿ ಮರು ಸ್ಥಾಪಿಸುವ ಕಾರ್ಯಕ್ಕೆ ಪಟ್ಟಣದ ‘ಗ್ರೀನ್ ಎಚ್‍ಬಿಎಚ್’ ತಂಡ ಮುಂದಾಗಿದೆ.

ಪಟ್ಟಣದ 1ನೇ ವಾರ್ಡ್‍ನಲ್ಲಿರುವ ಪುರಸಭೆಯ ಮುಕ್ಕಾಲು ಎಕರೆಯ ಉದ್ಯಾನದಲ್ಲಿ ಗ್ರೀನ್ ಎಚ್‍ಬಿಎಚ್ ತಂಡದ ಸದಸ್ಯರ ಸತತ 6 ತಿಂಗಳ ಪರಿಶ್ರಮದಿಂದಾಗಿ ಒಟ್ಟು 100 ಪ್ರಭೇದಗಳ ಅಪರೂಪದ ಸಸ್ಯ ಸಂಕುಲವೇ ಇಲ್ಲಿ ಅಭಿವೃದ್ಧಿ ಹೊಂದುತ್ತಿದೆ. ತಲಾ ಒಂದೊಂದು ತಳಿಯ ಗಿಡ ಇಲ್ಲಿದೆ.

ರಾಜ್ಯದ ಸವಣೂರು ಸೇರಿದಂತೆ ಕೇವಲ 5 ಕಡೆಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಆಫ್ರಿಕನ್ ತಳಿಯ ಆನೆಹುಣಿಸೆ (ಆಫ್ರಿಕನ್ ಬಾವೋಬಾಬ್) ಬೀಜಗಳನ್ನು ಅನ್ಯರಾಜ್ಯದಿಂದ ತರಿಸಿಕೊಂಡು ಬೀಜೊಪಚಾರ ಮಾಡಿದ 3 ತಿಂಗಳ ಗಿಡವೊಂದು ಬೆಳೆಯುವ ಹಂತದಲ್ಲಿದೆ. ಬೇರೆಡೆಯಿಂದ ತರಿಸಿದ್ದ 700 ಬೀಜಗಳನ್ನು ಮಾಲವಿಯ ಉದ್ಯಾನದಲ್ಲಿ ಬೀಜೊಪಚಾರದ ಮೂಲಕ ಜತನ ಮಾಡಿದ್ದರು, ಅವುಗಳಲ್ಲಿ ಉಳಿದವು 70 ಮಾತ್ರ, ಅದರಲ್ಲೊಂದು ಈಗ ಇಲ್ಲಿನ ಸಸ್ಯೋದ್ಯಾನದಲ್ಲಿದೆ.

ADVERTISEMENT

ಇದರೊಂದಿಗೆ ಬಲು ಅಪರೂಪ ಎನ್ನುವ ಕದಂಬ, ನಾಗಲಿಂಗ ಪುಷ್ಪ, ರಾತ್ರಿ ರಾಣಿ, ಹಗಲು ಮಲ್ಲಿಗೆ, ಮೂರೆಲೆ ಹೊನ್ನೆ, ಸೀಮೆ ಹುಣಸೆ, ರಾಮಫಲ,  ಮನೋರಂಜನಿ, ಗುಲಾಬಿ ಸೇಬು, ಲಿಚ್ಚಿ, ಸೀಮೆ ಹಲಸು, ಲಕ್ಷ್ಮೀತರು, ಬೆಣ್ಣೆಹಣ್ಣು, ಬೇಲದ ಹಣ್ಣು, ಚಕ್ಕೋತ, ಹೀಪ್ಪೆ ಮರ, ಮದ್ದಾಲೆ-ಹಾಲೆ ಮರ, ನೀರು ಕಣಿಗಿಲೆ, ದೇವ ಕಣಗಲೆ, ಅಡಿಕೆ, ಚೆರಳಿ, ಕಾಜಪುಟೆ ಮರ, ಶ್ರೀಗಂಧ, ಅಮಾಟೆಕಾಯಿ ಸಹಿತ 100 ಪ್ರಭೇದಗಳು ಇಲ್ಲಿ ಲಭ್ಯ.

ಪುರಸಭೆಯ ಪೌರಕಾರ್ಮಿಕರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ, ಉದ್ಯಾನದಲ್ಲಿ ಹನಿ ನೀರಾವರಿ ಅಳವಡಿಸಲಾಗಿದೆ.

ಸಸ್ಯೋದ್ಯಾನದಲ್ಲಿ ಪ್ರತಿ ಗಿಡಕ್ಕೂ ಕ್ಯೂಆರ್ ಕೋಡ್ ಅಳವಡಿಸಿರುವುದು

ಜುಲೈ 30ರಂದು ಬೆಳಿಗ್ಗೆ ಉದ್ಘಾಟನೆ ಸಾರ್ವಜನಿಕರಿಗೆ ಉಚಿತ ಪ್ರವೇಶ ‘ಗ್ರೀನ್ ಎಚ್‍ಬಿಎಚ್’ ತಂಡದ ವಿಶಿಷ್ಟ ಸೇವೆ

ಸ್ಥಳೀಯ ಸೇರಿದಂತೆ ವಿವಿಧ ರಾಜ್ಯಗಳಿಂದ ಬೀಜಗಳನ್ನು ತರಿಸಿ ಗಿಡ ಬೆಳೆಸಲಾಗಿದೆ. ಶೀಘ್ರದಲ್ಲಿಯೇ ಇದೊಂದು ಅಪರೂಪದ ಬಟಾನಿಕಲ್ ಗಾರ್ಡನ್ ಆಗಲಿದೆ
ಅಶೋಕ ಬಾವಿಕಟ್ಟಿ ಗ್ರೀನ್ ಎಚ್‍ಬಿಎಚ್ ತಂಡದ ಸದಸ್ಯ

ಗಿಡಗಳಿಗೆ ಕ್ಯೂಆರ್ ಕೋಡ್ ಅಳವಡಿಕೆ ಉದ್ಯಾನದಲ್ಲಿರುವ ಎಲ್ಲ 100 ಗಿಡಗಳಿಗೂ ಅದರ ವೈಜ್ಞಾನಿಕ ಮತ್ತು ಸಾಮಾನ್ಯ ಹೆಸರು ವಂಶಾಭಿವೃದ್ಧಿ ಮಾಹಿತಿ ಸುಲಭವಾಗಿ ತಿಳಿಯಲಿ ಎನ್ನುವ ಉದ್ದೇಶದಿಂದ ಪ್ರತ್ಯೇಕವಾಗಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ ಮೊಬೈಲ್‌ನಿಂದ ಸ್ಕ್ಯಾನ್‌ ಮಾಡಿದರೆ ಸಮಗ್ರ ವಿವರಣೆ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.