ADVERTISEMENT

ಹೊಸಪೇಟೆ| ಅತ್ಯಂತ ವಿರಳವಾಗಿ ಕಾಣಿಸುವ ‘ಸ್ಕಾಪ್ಸ್‌ ಗೂಬೆ‘ ದರೋಜಿ ಬಳಿ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 11:30 IST
Last Updated 19 ಅಕ್ಟೋಬರ್ 2025, 11:30 IST
   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ದರೋಜಿ ಕರಡಿಧಾಮದ ಬಳಿ ಈ ಭಾಗದಲ್ಲಿ ಅತ್ಯಂತ ವಿರಳವಾಗಿ ಕಾಣಿಸುವ ಭಾರತೀಯ ಸ್ಕಾಪ್ಸ್‌ ಗೂಬೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ವಿಶಿಷ್ಟ ಕಿವಿಯಂತಹ ಗರಿಯನ್ನು ಹೊಂದಿರುವ ಈ ಗೂಬೆ 20ರಿಂದ 25 ಸೆಂಟಿಮೀಟರ್‌ನಷ್ಟು ಉದ್ದವಿದ್ದು, ಬೂದು ಬಣ್ಣದಿಂದ ಕೂಡಿದೆ. ಇದರ ಕಣ್ಣು ಕಡು ಕಪ್ಪು. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆಹಚ್ಚುವುದು ಬಹಳ ಕಷ್ಟ. ಹೀಗಾಗಿ ಈ ಗೂಬೆಗೆ ‘ಛದ್ಮವೇಷಧಾರಿ’ ಎಂದು ಕರೆಯಲಾಗುತ್ತದೆ.

ಶನಿವಾರ ರಾತ್ರಿ ದರೋಜಿ ಕರಡಿಧಾಮದ ಬಳಿ ಗೂಬೆಯ ವಟ್ ವಟ್ ಸದ್ದಿನಿಂದ ಎಚ್ಚೆತ್ತ ಪಕ್ಷಿ ವೀಕ್ಷಕರಾದ ಸವ್ಯಸಾಚಿ ರಾಯ್‌, ಶ್ರೀಧರ ಪೆರುಮಾಳ್‌ ಮತ್ತು ಪಂಪಯ್ಯ ಸ್ವಾಮಿ ಮಳೀಮಠ ಅವರು ಗೂಬೆಯನ್ನು ಹಿಂಬಾಲಿಸಿದ್ದರು. ಕೊನೆಗೂ ಅದು ಶ್ರೀಧರ ಪೆರುಮಾಳ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು.

ADVERTISEMENT

‘ಪಶ್ಚಿಮ ಘಟ್ಟದ ಭಾಗದಲ್ಲಿ ಇಂತಹ ಗೂಬೆಗಳು ಅಪರೂಪಕ್ಕೆ ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಅದರಲ್ಲೂ ಮುಖ್ಯವಾಗಿ ಬಳ್ಳಾರಿ– ಹೊಸಪೇಟೆ ವ್ಯಾಪ್ತಿಯಲ್ಲಿ ಇಂತಹ ಗೂಬೆ ಕಾಣಿಸಿದ್ದೇ ಇಲ್ಲ’ ಎಂದು ಪಂಪಯ್ಯಸ್ವಾಮಿ ಮಳೀಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.