ಸಂತೋಷ್ ಲಾಡ್
ಹೊಸಪೇಟೆ (ವಿಜಯನಗರ): ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಹಿಳಾ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು ಸರಿ ಕಾಣುವುದಿಲ್ಲ, ಬಿಜೆಪಿ ನಾಯಕರಷ್ಟೇ ಅಲ್ಲ, ಕಾಂಗ್ರೆಸ್, ಇತರ ಪಕ್ಷದವರೂ ಹಾಗೆ ಮಾಡಬಾರದು. ಇನ್ನು ಮುಂದೆ ಇಂತಹ ಹೇಳಿಕೆ ನೀಡದಿರಲಿ ಎಂದು ಮಾಧ್ಯಮದ ಮೂಲಕ ಮನವಿ ಮಾಡುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಇಲ್ಲಿ ಶುಕ್ರವಾರ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿದ ಬಳಿಕ ಮಾಧ್ಯಮದವರೊಂಗೆ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಇರುವವರು ಅವಹೇಳನಕಾರಿಯಾಗಿ ಮಾತನಾಡುವುದನ್ನು ಸಮಾಜ ಗುರುತಿಸಬೇಕು, ಮಾಧ್ಯಮಗಳು ಕೂಡ ಇಂಥವರಿಗೆ ಪ್ರಚಾರ ಕೊಡಬಾರದು, ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲ. ಮಾಧ್ಯಮದವರು ಕೇಳುವುದು ಬಿಟ್ಟರೆ ಎಲ್ಲವೂ ಸರಿ ಇರುತ್ತದೆ, ಅಸಮಾಧಾನಿತ ಶಾಸಕರನ್ನು ಕರೆದು ಸುರ್ಜೇವಾಲಾ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಬಿಜೆಪಿಯಲ್ಲೂ ಇದೆ: ‘ಬಿಜೆಪಿಯಲ್ಲಿ ಸಹ ನರೇಂದ್ರ ಮೋದಿ ಹೋಗಬೇಕು ಎಂಬ ಬಲವಾದ ಒತ್ತಾಯ ಇದೆ, ಆದರೆ ಯಾರೂ ಮುಕ್ತವಾಗಿ ಹೇಳುತ್ತಿಲ್ಲ ಅಷ್ಟೇ, ಬಿಜೆಪಿಗೆ ಮೋದಿ ಕಂಟಕವಾಗಿದ್ದಾರೆ, ಗಡ್ಕರಿ ಅವರನ್ನು ಪಿಎಂ ಮಾಡಬೇಕು ಎಂದು ಹೇಳುವವರು ಬಹಳ ಮಂದಿ ಇದ್ದಾರೆ, ಆದರೆ ಅದು ಆಗುತ್ತಿಲ್ಲ’ ಎಂದು ಸಚಿವ ಲಾಡ್ ಹೇಳಿದರು.
‘ಮೋದಿಯವರಿಂದ ದೇಶಕ್ಕೆ ಏನು ಕೊಡುಗೆ ಸಿಕ್ಕಿದೆ? ಮಾಧ್ಯಮ ಪ್ರಚಾರ ಬಿಟ್ಟರೆ ಬೇರೆ ಏನೂ ಇಲ್ಲ, ಬಂಗಾರಕ್ಕೆ ತೊಲೆಗೆ ₹29 ಸಾವಿರ ಇದ್ದುದು ₹1 ಲಕ್ಷಕ್ಕೆ ಏರಿಕೆಯಾಗಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ನಾಯಕರ ಮೇಲೆ ಇ.ಡಿ ದಾಳಿ ನಡೆಸಿ, ತಮ್ಮ ಪಕ್ಷಕ್ಕೆ ಕರೆದುಕೊಂಡಿದ್ದಾರೆ, ಅವರಿಗೆ ಕ್ಲೀನ್ ಚೀಟ್ ಕೂಡ ನೀಡಿದ್ದಾರೆ’ ಎಂದರು.
ವಾಲ್ಮೀಕಿ ಹಗರಣದ ಶೇ 90ರಷ್ಟು ಹಣ ವಾಪಸ್ ಬಂದಿದೆ ಎಂದು ಹೇಳಿ, ಹಗರಣ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.