ಹೊಸಪೇಟೆ (ವಿಜಯನಗರ): ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಇ.ಡಿ ದಾಳಿಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಖಂಡಿಸಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಮೇಶ್ವರ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ನಡೆಯುತ್ತಿರುವ ಬಹುದೊಡ್ಡ ಕುತಂತ್ರದ ಭಾಗ ಇದು. ಈ ಘಟನೆಯಿಂದ ಶುದ್ಧಹಸ್ತರಾಗಿ ಪರಮೇಶ್ವರ್ ಅವರು ಹೊರ ಬರುತ್ತಾರೆ ಎಂಬ ವಿಶ್ವಾಸ ಇದೆ. ಸಮಸ್ತ ದಲಿತ ಸಮುದಾಯ ಅವರ ಜತೆಗಿದೆ. ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ನಂತರ ಇಂದು ಕರ್ನಾಟಕದಲ್ಲಿ ದಲಿತ ಸಮುದಾಯದ ನಾಯಕರಾಗಿ ಕಂಗೊಳಿಸಿರುವ ಪರಮೇಶ್ವರ ಅವರು ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2019ರಲ್ಲಿಯೂ ಇದೇ ಶಿಕ್ಷಣ ಸಂಸ್ಥೆ ಮೇಲೆ ಇ.ಡಿ ದಾಳಿಯಾಗಿತ್ತು. ಅಂದು ಸಹ ಅವರು ಸಿಎಂ ರೇಸ್‌ನಲ್ಲಿದ್ದರು. ಇ.ಡಿ ದಾಳಿಯಿಂದ ಯಾವ ಲೋಪವೂ ಕಂಡುಬಂದಿರಲಿಲ್ಲ. ಪರಮೇಶ್ವರ ಅವರ ಮೇಲೆ ವೈಯಕ್ತಿಕವಾಗಿ ಯಾವ ಕಳಂಕವೂ ಇಲ್ಲ. ಇಂತಹ ಒಬ್ಬ ಧೀಮಂತ ವ್ಯಕ್ತಿಯ ಮೇಲೆ ಅವರು ನಿರ್ಮಿಸಿದ ಶಿಕ್ಷಣ ಸಂಸ್ಥೆಯನ್ನು ಮುಂದಿದಿಟ್ಟುಕೊಂಡು ಇ.ಡಿ. ದಾಳಿಯನ್ನು ಮಾಡಿ ಅವರ ಶಕ್ತಿಯನ್ನು ಕುಗ್ಗಿಸಲು ಮುಂದಾಗುತ್ತಿರುವುದು ಬಹುದೊಡ್ಡ ರಾಜಕೀಯ ಷಡ್ಯಂತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.