ಹೊಸಪೇಟೆ (ವಿಜಯನಗರ): ಕೋವಿಡ್ ಲಾಕ್‌ಡೌನ್‌ನಲ್ಲಿ ಕೊರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸಿದ ಗುತ್ತಿಗೆ ನೌಕರರ ಸೇವಾವಧಿ ವಿಸ್ತರಿಸಬೇಕೆಂದು ಆಗ್ರಹಿಸಿ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪುನೀತ್ ರಾಜಕುಮಾರ್ ವೃತ್ತದಿಂದ ಜಿಲ್ಲಾಧಿಕಾರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಆರೋಗ್ಯ ಸಚಿವ ಡಾ. ಸುಧಾಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್ ಬಾಬು ಅವರಿಗೆ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅವಿನಾಶ್ ಆರ್. ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಗೊಂಡ ನೌಕರರ ಸೇವಾವಧಿ ಮಾರ್ಚ್ ತಿಂಗಳ ಅಂತ್ಯಕ್ಕೆ ಕೊನೆಗೊಂಡಿದೆ. ಕೋವಿಡ್ ಸಂಕಷ್ಟದಲ್ಲಿ ಜೀವವನ್ನು ಲೆಕ್ಕಿಸದೇ ಕೆಲಸ ನಿರ್ವಹಿಸಲಾಗಿದೆ. ಕೋವಿಡ್‌ನಿಂದ ಆರೋಗ್ಯ ವ್ಯವಸ್ಥೆ ಬಯಲಿಗೆ ಬಂದಿದೆ. ಲಕ್ಷಾಂತರ ಸಿಬ್ಬಂದಿಯ ಅಗತ್ಯವಿದೆ. ಹೀಗಾಗಿ ಈಗಿರುವವರ ಸೇವಾವಧಿ ಮುಂದುವರೆಸಬೇಕು. ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡು ತಿಂಗಳ ವೇತನ ಇದುವರೆಗೆ ಪಾವತಿಸಿಲ್ಲ. ಕೂಡಲೇ ವೇತನ ಪಾವತಿಸಬೇಕು. ಇಲಾಖೆಯ ನೇರ ನೇಮಕಾತಿಯಲ್ಲಿ ಗುತ್ತಿಗೆ ನೌಕರರ ಸೇವೆಯನ್ನು ಪರಿಗಣಿಸಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ನಿರಂಜನ್, ಮಾರೇಶ್, ಶಾರದಾ, ತುಂಗಾ, ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.