ಹೊಸಪೇಟೆ (ವಿಜಯನಗರ): ನಗರ ಮತ್ತು ಪಟ್ಟಣಗಳ ರಸ್ತೆಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಸ್ಥಳ ಗುರುತಿಸಿ ಶೀಘ್ರವೇ ವೈಜ್ಞಾನಿಕವಾಗಿ ರಸ್ತೆತಡೆಗಳನ್ನು ಅಳವಡಿಸಬೇಕು, ರಸ್ತೆತಡೆಗಳಿಂದಲೇ ಅಪಘಾತ ಆಗದಂತೆ ಎಚ್ಚರ ವಹಿಸಬೇಕು ಎಂದು ಎಂ.ಎಸ್.ದಿವಾಕರ್ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣಗಳಲ್ಲಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಅನೇಕ ದೂರುಗಳು ಬಂದ ಕಾರಣ ವೇಗ ನಿಯಂತ್ರಣಕ್ಕೆ ಸಣ್ಣ ರಸ್ತೆ ತಡೆಗಳನ್ನು ಅಳವಡಿಸಬೇಕಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
‘ಶಾಲಾ ಕಾಲೇಜುಗಳ ರಸ್ತೆ ಸೇರಿದಂತೆ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳನ್ನು ಗುರುತಿಸಬೇಕು. ಅನೇಕ ಅಪಘಾತಗಳಲ್ಲಿ ಸಾವಿನ ಪ್ರಕರಣಗಳಿಲ್ಲದಿದ್ದರೂ, ಸವಾರರು ಗಂಭೀರ ಗಾಯಗೊಂಡಿರುವ ನಿದರ್ಶನ ಇದೆ. ಹೀಗಾಗಿ ವಾಹನಗಳ ವೇಗ ನಿಯಂತ್ರಣ ಅಗತ್ಯವಾಗಿದೆ’ ಎಂದು ಅವರು ತಿಳಿಸಿದರು.
ರಸ್ತೆಯಲ್ಲಿ ನೀರು ನಿಲ್ಲದಿರಲಿ: ಹೊಸಪೇಟೆ ನಗರದಲ್ಲಿ ಮಳೆಯಿಂದಾಗಿ ರಸ್ತೆ ಮೇಲೆ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ರಸ್ತೆಯ ಮೇಲಿನ ನೀರು ಸರಾಗವಾಗಿ ಚರಂಡಿಗಳಿಗೆ ಹರಿಯುವಂತೆ ಕ್ರಮ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿ ಹೊಸಹಳ್ಳಿ ರಸ್ತೆಯ ಬಳಿ 300 ಮೀಟರ್ ಉದ್ದದ ಚರಂಡಿ ನಿರ್ಮಿಸಬೇಕು, ಅಲ್ಲಿ ರಸ್ತೆಯ ಮೇಲಿನ ಕಸ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹದಗೆಟ್ಟ ರಸ್ತೆ: ‘ಅರಸೀಕೆರೆಯಿಂದ ಮತ್ತಿಹಳ್ಳಿಗೆ ಹೋಗುವ ಎರಡು ಕಿಲೋಮೀಟರ್ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯ ಎಂಬಷ್ಟರ ಮಟ್ಟಿಗೆ ಕೆಟ್ಟುಹೋಗಿದೆ. ಅದರ ಬಗ್ಗೆ ತುರ್ತು ಗಮನ ಹರಿಸಬೇಕು. ಮರಿಯಮ್ಮನಹಳ್ಳಿಯ ಹತ್ತಿರ ಡಣಾಯಕನಕೆರೆ, ದೇವಲಾಪುರ ಮತ್ತು ಗೊಲ್ಲರಹಳ್ಳಿಗಳಲ್ಲಿ ರೋಡ್ ಕ್ರಾಸ್ ಬಳಿ ಲೈಟ್ ಮತ್ತು ರಸ್ತೆತಡೆಗಳನ್ನು ಆಳವಡಿಸಬೇಕು. ನಿರಂತರ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ನಿಲ್ಲದಂತೆ ಮುಚ್ಚಲು ಕ್ರಮವಹಿಸಬೇಕು’ ಎಂದು ಅವರು ಸೂಚನೆ ನೀಡಿದರು.
ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 6 ಕಡೆ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು, ಈಗಾಗಲೇ 5 ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಲಾಗಿದೆ. ಉಳಿದ 1 ಬ್ಲಾಕ್ ಸ್ಪಾಟ್‌ನ್ನು ಆದಷ್ಟು ಬೇಗ ಪೂರೈಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಸಭೆಯಲ್ಲಿ ಸಾರಿಗೆ ಇಲಾಖೆ, ಪಿಡಬ್ಲೂಡಿ, ಎನ್‌ಎಚ್‌ಎಐ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಡಿಸಿ ಕಚೇರಿ ಬಳಿ ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆ ಕತ್ತರಿಸಿ–ಎಸ್‌ಪಿ ಅನಂತಶಯನಗುಡಿ | ರೈಲು ಮೇಲ್ಸೇತುವೆ ಬಳಿ ರಸ್ತೆ ಗುಂಡಿ ಮುಚ್ಚಲು ಸಲಹೆ | ಬಳ್ಳಾರಿ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳ ಬಗ್ಗೆಯೂ ಚಿಂತೆ
ಅಪಘಾತ ಪ್ರಕರಣಗಳನ್ನು ತಗ್ಗಿಸುವಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳ ಪಾತ್ರ ಹೆಚ್ಚಾಗಿದೆ. ಮಳೆಗಾಲ ಮುಗಿಯುವವರೆಗೆ ಅಧಿಕಾರಿಗಳು ನಿರ್ಲಕ್ಷಿಸದೇ ಎಲ್ಲಾ ರಸ್ತೆಗಳ ಮೇಲೆ ನಿಗಾವಹಿಸಬೇಕುಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ರಸ್ತೆ ಹೊಂಡ ಮುಚ್ಚಿಸಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ರಸ್ತೆಗಳಲ್ಲಿ ರಸ್ತೆತಡೆಗಳನ್ನು ಅಳವಡಿಸುವ ಮುನ್ನ ಆಯಾ ವೃತ್ತ ನಿರೀಕ್ಷಕರ ಸಲಹೆ ಪಡೆದುಕೊಳ್ಳಬೇಕು ಹೊಸಪೇಟೆ ನಗರದಲ್ಲಿ ಮುಖ್ಯ ವೃತ್ತಗಳಲ್ಲಿ ಸಿಗ್ನಲ್ ಬೋರ್ಡ್ ಮತ್ತು ರಸ್ತೆತಡೆಗಳನ್ನು ಆಳವಡಿಸಬೇಕು ಎಂದರು. ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಮುಂದೆ ಹೋಗುವ ದಾರಿಯಲ್ಲಿ ಬಹಳ ತಿರುವುಗಳಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂಬ ಮಾಹಿತಿ ಇದೆ. ಪಾಪಿನಾಯಕನಹಳ್ಳಿ ಮತ್ತು ವಡ್ಡರಹಳ್ಳಿಯಲ್ಲಿ ರಸ್ತೆಗಳ ಮೇಲೆ ಹೆಚ್ಚು ಗುಂಡಿಗಳು ಬಿದ್ದು ರಸ್ತೆಗಳು ಹದಗೆಟ್ಟಿವೆ. ಹೆದ್ದಾರಿಗಳಲ್ಲಿ ಅಪಘಾತಗಳು ತಡೆಗಟ್ಟಲು ಮೊದಲು ಆದ್ಯತೆ ನೀಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.