ADVERTISEMENT

ಹಂಪಿ ವಿರೂಪಾಕ್ಷನ ಹುಂಡಿ: 3 ತಿಂಗಳಲ್ಲಿ ₹10.93 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:19 IST
Last Updated 18 ಏಪ್ರಿಲ್ 2024, 16:19 IST
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಗುರುವಾರ ಗರ್ಭಗುಡಿಯ ಪ್ರಧಾನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ದುಡ್ಡಿನ ಎಣಿಕೆ ನಡೆಯಿತು
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಗುರುವಾರ ಗರ್ಭಗುಡಿಯ ಪ್ರಧಾನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ದುಡ್ಡಿನ ಎಣಿಕೆ ನಡೆಯಿತು   

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನದ ಗರ್ಭಗುಡಿಯ ಮುಂಭಾಗ ಮೂರು ತಿಂಗಳ ಹಿಂದೆ ಇಡಲಾಗಿರುವ ಹುಂಡಿಯಲ್ಲಿ ₹10.93 ಲಕ್ಷ ಕಾಣಿಕೆ ಹಣ ಸಂಗ್ರಹವಾಗಿದೆ.

ಈಚೆಗೆ ದೇವಸ್ಥಾನದ ಇತರ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣದ ಲೆಕ್ಕಾಚಾರ ನಡೆದಿತ್ತು. ಆದರೆ ಈ ಒಂದು ಹುಂಡಿಯ ಎಣಿಕೆ ನಡೆದಿರಲಿಲ್ಲ. ಗುರುವಾರ ಎಣಿಕೆ ನಡೆದಾಗ ₹10,93,029 ಸಂಗ್ರಹವಾಗಿರುವುದು ತಿಳಿಯಿತು.

ವಿರೂಪಾಕ್ಷನ ಮುಂಭಾಗ ನಂದಿಗೆ ಅಡ್ಡಲಾಗಿ ಕಾಣಿಕೆ ಹುಂಡಿಯನ್ನು ಇಡುವುದಕ್ಕೆ ಕೆಲವು ಭಕ್ತರಿಂದ ಹಾಗೂ ಅರ್ಚಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂದಿಯ ಭುಜಗಳಿಂದ ಶಿವನನ್ನು ನೋಡುವುದಕ್ಕೆ ಅಡ್ಡಿ ಉಂಟಾಗುತ್ತದೆ ಎಂಬುದು ಆಕ್ಷೇಪದ ಮೂಲವಾಗಿತ್ತು. ಆದರೆ ಇಲಾಖೆಯ ಸಚಿವರು, ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಇದ್ದ ಕಾರಣ ಯಾವ ಒತ್ತಡಕ್ಕೂ ಮಣಿಯದ ಆಡಳಿತಾಧಿಕಾರಿ ಅವರು ಹುಂಡಿಯನ್ನು ಅಲ್ಲಿಂದ ತೆರವು ಮಾಡದೆ ಅಲ್ಲೇ ಇರಿಸಿದ್ದರು. ಶಿವನಿಗೆ ಸಲ್ಲುವ ಪ್ರಧಾನ ಅಭಿಷೇಕದದ ಸಮಯ ಹಾಗೂ ಮಹಾಮಂಗಳಾರತಿ ವೇಳೆ ಹುಂಡಿಯನ್ನು ಬದಿಗೆ ಸರಿಸಿ ಭಕ್ತರ ಭಾವನೆಯನ್ನು ಪುರಸ್ಕರಿಸಲಾಗುತ್ತಿದೆ.

ADVERTISEMENT

ದೇವಸ್ಥಾನದ ಇತರ ಕಾಣಿಕೆ ಹುಂಡಿಗಳಿಂದ ಹಾಗೂ ಸೇವೆಗಳಿಂದ 2023–24ನೇ ಸಾಲಿನಲ್ಲಿ ವಿರೂಪಾಕ್ಷನಿಗೆ ₹2,90 ಕೋಟಿ ಆದಾಯ ಬಂದಿದೆ. 2022–23ರಲ್ಲಿ ₹2.11 ಕೋಟಿ ಆದಾಯ ಸಂಗ್ರಹವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.