
ಹೊಸಪೇಟೆ (ವಿಜಯನಗರ): ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ ಪ್ರಯುಕ್ತ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾದ ಏಕತಾ ಓಟ ಕಾರ್ಯಕ್ರಮದಲ್ಲಿ ನೂರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಸುಮಾರು ಮೂರು ಕಿಲೋಮೀಟರ್ ದೂರ ಸಾಗಿದ ಈ ಓಟದ ಕೊನೆಯುಲ್ಲಿ ವಿನಯ್ ಜಿ. ಪ್ರಥಮ ಸ್ಥಾನ ಗಳಿಸಿ ಬಹುಮಾನ ಪಡೆದುಕೊಂಡರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಎಸ್‌ಪಿ ಎಸ್.ಜಾಹ್ನವಿ, ಎಎಸ್‌ಪಿ ಜಿ.ಮಂಜುನಾಥ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ಎಲ್ಲ ಗಣ್ಯರ ಜತೆಗೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್.ದಾದಾಪೀರ್ ಹಾಗೂ ಇತರರು ಸಹ ಸ್ವಲ್ಪ ದೂರ ಸ್ಪರ್ಧಿಗಳೊಂದಿಗೆ ಓಡಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಇದಕ್ಕೆ ಮೊದಲು ಡಿ.ಸಿ, ಸಿಇಒ, ಎಎಸ್‌ಪಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸಾಧನೆ, ದೇಶ ಒಗ್ಗೂಡಿಸಲು ಅವರು ಪಟ್ಟ ಶ್ರಮಗಳ ಬಗ್ಗೆ ವಿವರಿಸಿದರು. ಎಸ್‌ಪಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಫಲಿತಾಂಶ: ನಗರದ ಪುನೀತ್ ರಾಜ್‌ಕುಮಾರ್ ವೃತ್ತದಿಂದ ಆರಂಭವಾದ ಏಕತಾ ಓಟ ಮಾಡ್ರನ್ ವೃತ್ತ, ಗಾಂಧಿ ಚೌಕ, ಪಾದಗಟ್ಟೆ ಆಂಜನೇಯ ದೇವಸ್ಥಾನ, ದೊಡ್ಡ ಮಸೀದಿ, ಮದಕರಿ ನಾಯಕ ಸರ್ಕಲ್, ವಾಲ್ಮೀಕಿ ಸರ್ಕಲ್, ಮಾರ್ಕಂಡೇಶ್ವರ ದೇವಸ್ಥಾನ, 100 ಹಾಸಿಗೆ ಆಸ್ಪತ್ರೆ, ವಿಎನ್‌ಸಿ ಮೂಲಕ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಬಂದು ತಲುಪಿತು. ವಿನಯ್ ಜಿ. ಪ್ರಧಮ, ಎಂ.ಶೇಖಾವಲಿ ದ್ವಿತೀಯ ಹಾಗೂ ಯಶವಂತ ಡಿ.ಎಸ್. ತೃತೀಯ ಬಹುಮಾನ ಪಡೆದರು.
ಡಿವೈಎಸ್‌ಪಿ ಟಿ.ಮಂಜುನಾಥ್, ಹಲವು ಇನ್‌ಸ್ಪೆಕ್ಟರ್‌ಗಳು, ಪಿಎಸ್ಐಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.