ಹೊಸಪೇಟೆ(ವಿಜಯನಗರ): ಮ್ಯಾರೇಜ್ ಬೋಕರ್‌ಗಳ ಸುಲಿಗೆ ತಪ್ಪಿಸುವುದು, ಉತ್ತಮ ಸಂಬಂಧ ಬೆಸೆಯುವುದು, ಪೋಷಕರ ಹಣ, ಸಮಯ ಉಳಿತಾಯಕ್ಕೆ ವಧು- ವರರ ಸಮಾವೇಶ ಸಹಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸವಿತಾ ಸಮಾಜ ಹಾಗೂ ದಾವಣಗೆರೆ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಜ್ಯ ಮಟ್ಟದ ಸವಿತಾ ಸಮಾಜದ ವಧು–ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜದ ಯುವಕರು ಸಾಂಪ್ರದಾಯಿಕ ಕುಲವೃತ್ತಿಗೆ ಸೀಮಿತವಾಗಿಲ್ಲ. ಶೈಕ್ಷಣಿಕವಾಗಿ ದಾಪುಗಾಲು ಹಾಕುತ್ತಿದ್ದು, ನಾನಾ ಕ್ಷೇತ್ರಗಳಲ್ಲಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಿದ್ದಾರೆ. ಆದರೆ, ಮದುವೆ ವಿಚಾರ ಬಂದಾಗ ಇತ್ತೀಚೆಗೆ ಯುವ ಜನರಲ್ಲಿ ಬೇಕು, ಬೇಡಿಕೆಗಳು ಹೆಚ್ಚುತ್ತಿದ್ದು, ಮದುವೆ ವಿಳಂಬಕ್ಕೆ ಕಾರಣವಾಗುತ್ತಿವೆ ಎಂದರು.
ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟಾಚಲಪತಿ ಪಿ.ಬಿ. ಮಾತನಾಡಿ, ಮದುವೆಗೆ ಉತ್ತಮ ಸಂಗಾತಿ ಹುಡುಕಿಕೊಳ್ಳುವುದು ಅತಿ ಅವಶ್ಯಕ. ಆದರೆ, ಮದುವೆ ಬ್ರೋಕರ್ಗಳು ಇದನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುತ್ತಾರೆ. ಜೊತೆಗೆ ಸುಳ್ಳು ಹೇಳಿ ಸಂಬಂಧ ಕುದುರಿಸುತ್ತಾರೆ. ಇದನ್ನು ತಪ್ಪಿಸಲು ವಧು-ವರರ ಸಮಾವೇಶ ಸಹಕಾರಿಯಾಗಿದೆ. ವೇದಿಕೆಯಿಂದ ಕಳೆದ 9 ವರ್ಷಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮದುವೆಗಳು ನಿಶ್ಚಯವಾಗಿವೆ ಎಂದರು.
ನಿವೃತ್ತ ಶಿಕ್ಷಕ ನಾಗೇಶ್, ನಿವೃತ್ತ ಎಎಸ್ಐ ಶ್ರೀನಿವಾಸ, ಮನೋಹರ್ ಕುಮಾರ್, ರಾಮಲಿಂಗಪ್ಪ, ನಾರಾಯಣ ಹಡಪದ, ಎಎಸ್ಐ ಎಂ.ಸುರೇಶ್, ಆರ್.ನಾಗರಾಜ್, ವಿಜಯ ಭಾಸ್ಕರ್ ಇಟಗಿ, ಎನ್.ವೇಣುಗೋಪಾಲ, ಗುರುರಾಜ್, ಡಾ.ರಾಘವೇಂದ್ರ ಗುರ್ಜಾಲ, ಕೃಷ್ಣ ಹಡಪದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.