ADVERTISEMENT

ಮೀಸಲಾತಿಗೆ ಆಗ್ರಹಿಸಿ ಡಿ.ಸಿ ಕಚೇರಿಗೆ ಮುತ್ತಿಗೆ; ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ

ಮೀಸಲು ಹೆಚ್ಚಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 7:32 IST
Last Updated 11 ಜುಲೈ 2022, 7:32 IST
   

ಹೊಸಪೇಟೆ (ವಿಜಯನಗರ): ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ನೂರಾರು ಜನ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಅಲ್ಲಿ ಕೆಲವು ನಿಮಿಷಗಳವರೆಗೆ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಪ್ರವೇಶ ದ್ವಾರಕ್ಕೆ ಸರಪಳಿ ಹಾಕಿ, ಬೀಗ ಜಡಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆಯಿತು.

ADVERTISEMENT

ಶಾಸಕ ಭೀಮ ನಾಯ್ಕ ಮಾತನಾಡಿ, ಮೀಸಲು ಹೆಚ್ಚಿಸಬೇಕೆಂದು ನಡೆಸುತ್ತಿರುವ ಹೋರಾಟ ಹೊಸದೇನಲ್ಲ. ಅನೇಕ‌ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದರು.

ಬಿಜೆಪಿಯವರು ಚುನಾವಣೆ ಪೂರ್ವದಲ್ಲಿ,ಯಡಿಯೂರಪ್ಪನವರುಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲು ಹೆಚ್ಚಿಸುವುದಾಗಿ ಹೇಳಿದ್ದರು. ಮೀಸಲು ಹೆಚ್ಚಿಸಲು ಶ್ರಮಿಸುತ್ತೇನೆ. ಅದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಆದರೆ, ಈಗ ಏನಾಗಿದೆ ಎಂದರು.

ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ 150ಕ್ಕೂ ಹೆಚ್ಚು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ‌ಸ್ಪಂದಿಸದೇ ಇರುವುದು ದುರಂತ ಎಂದರು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ದುರುಗಪ್ಪ ಪೂಜಾರಿ, ಜಂಬಯ್ಯ ನಾಯಕ, ಗುಜ್ಜಲ್ ನಾಗರಾಜ್, ಗುಜ್ಜಲ್ ರಘು, ಎಂ.ಸಿ. ವೀರಸ್ವಾಮಿ, ಸೋಮಶೇಖರ್ ಬಣ್ಣದಮನೆ, ರಾಜಶೇಖರ್ ಹಿಟ್ನಾಳ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.