ADVERTISEMENT

ಕೂಡ್ಲಿಗಿ: ವಿದ್ಯುತ್ ಸ್ಪರ್ಶ; ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 10:25 IST
Last Updated 17 ಸೆಪ್ಟೆಂಬರ್ 2025, 10:25 IST
   

ಕೂಡ್ಲಿಗಿ (ವಿಜಯುನಗರ ಜಿಲ್ಲೆ): ನೀರು ಕಾಯಿಸಲು ಹಾಕಿದ್ದ ವಿದ್ಯುತ್ ಹೀಟರ್ ಸ್ಪರ್ಶವಾಗಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಕೆ.ಎಚ್. ಭಾಗ್ಯಶ್ರೀ (15) ಎಂಬಾಕೆ ಮೃತಪಟ್ಟ ಘಟನೆ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಕಕ್ಕುಪ್ಪಿ ಗ್ರಾಮದ ಕೆ. ಹುಲೇಶ್, ಅಂಬಿಕಾ ದಂಪತಿಯ ಪುತ್ರಿ ಭಾಗ್ಯಶ್ರೀ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿದ್ದಳು. ಬುಧವಾರ ಬೆಳಿಗ್ಗೆ ಶಾಲೆಗೆ ಹೋಗಲೆಂದು ವಾಟರ್ ಹೀಟರ್ ಹಾಕಿ ನೀರು ಕಾಯಿಸಿಕೊಂಡು ಸ್ನಾನ ಮಾಡಿ, ನಂತರ ತನ್ನ ತಾಯಿಗೆ ನೀರು ಕಾಯಿಸಲು ಇಟ್ಟಿದ್ದಳು. ಆದರೆ ತನಗೆ ಈಗಲೇ ಬೇಡ, ಅದನ್ನು ತೆಗೆದು ಬಿಡು ಎಂದು ತಾಯಿ ಹೇಳಿದ್ದರಿಂದ ವಾಟರ್ ಹೀಟರ್ ಸ್ವಿಚ್‌ ಆಫ್ ಮಾಡದೆ ಹೀಟರನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಶವಾಯಿತು ಎಂದು ಹೇಳಲಾಗಿದೆ.

ವಿದ್ಯುತ್ ಆಘಾತದಿಂದ ತಕ್ಷಣ ಕೆಳಗೆ ಬಿದ್ದು ಆಸ್ವಸ್ಥಳಾಗಿದ್ದ ಭಾಗ್ಯಶ್ರೀಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು, ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಶಾಸಕರ ಭೇಟಿ, ಸಾಂತ್ವನ: ವಿಷಯ ತಿಳಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಮೃತ ಬಾಲಕಿ ಶವ ಇಟ್ಟಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅಂತ್ಯಸಂಸ್ಕಾರಕ್ಕಾಗಿ ಸಹಾಯಧನ ನೀಡಿ ಕುಟುಂಬದವರನ್ನು ಸಮಾಧಾನಪಡಿಸುವ ಯತ್ನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.