ADVERTISEMENT

ಹೊಸಪೇಟೆ: ವಿಘ್ನ ನಿವಾರಕನಿಗೆ ಭಕ್ತಿಯ ಬೀಳ್ಕೊಡುಗೆ

ಶ್ರದ್ಧಾ, ಭಕ್ತಿಯ ನಡುವೆ 199 ಗಣಪನ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:23 IST
Last Updated 12 ಸೆಪ್ಟೆಂಬರ್ 2021, 17:23 IST
ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯ ತುಂಗಭದ್ರಾ ಕೆಳಮಟ್ಟದ ಕಾಲುವೆಯಲ್ಲಿ (ಎಲ್‌ಎಲ್‌ಸಿ) ಭಾನುವಾರ ರಾತ್ರಿ ಗಣಪನ ಮೂರ್ತಿಗಳನ್ನು ವಿಸರ್ಜಿಸಲಾಯಿತು
ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯ ತುಂಗಭದ್ರಾ ಕೆಳಮಟ್ಟದ ಕಾಲುವೆಯಲ್ಲಿ (ಎಲ್‌ಎಲ್‌ಸಿ) ಭಾನುವಾರ ರಾತ್ರಿ ಗಣಪನ ಮೂರ್ತಿಗಳನ್ನು ವಿಸರ್ಜಿಸಲಾಯಿತು   

ಹೊಸಪೇಟೆ (ವಿಜಯನಗರ): ಶ್ರದ್ಧಾ, ಭಕ್ತಿಯ ನಡುವೆ ಭಾನುವಾರ ರಾತ್ರಿ ನಗರ ಸೇರಿದಂತೆ ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ 199 ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಆಯಾ ಗಣೇಶ ಮಂಡಳಿಯವರು ಅಲಂಕರಿಸಿದ ವಾಹನದಲ್ಲಿ ಬೆನಕನನ್ನು ಪ್ರತಿಷ್ಠಾಪಿಸಿ, ‘ಗಣಪತಿ ಬೊಪ್ಪ ಮೊರ್‍ಯಾ, ಅಗಲೆ ಬರಸ್‌ ತು ಜಲ್ದಿ ಆ’, ಜೈ ಗಣೇಶ, ಜೈ ಜೈ ಗಣೇಶ’ ಎಂದು ಯುವಕರು ಭಕ್ತಿಭಾವದಿಂದ ಘೋಷಣೆ ಕೂಗಿದರು. ಡಿ.ಜೆ ಹಚ್ಚಿಕೊಂಡು ಮೂರ್ತಿಗಳ ಮೆರವಣಿಗೆಗೆ ಅವಕಾಶ ಕಲ್ಪಿಸದ ಕಾರಣ ಪಟಾಕಿ ಸಿಡಿಸುತ್ತ ಹೆಜ್ಜೆ ಹಾಕಿದರು. ತಮಟೆ ಬಾರಿಸಿ, ಸಂಭ್ರಮಿಸಿದರು.

ತುಂಗಭದ್ರಾ ಕಾಲುವೆಯ ಬಳಿ ಸಾಲಾಗಿ ವಾಹನಗಳಲ್ಲಿ ಬಂದು ವಿಘ್ನ ನಿವಾರಕನಿಗೆ ಪೂಜೆ ನೆರವೇರಿಸಿ, ಆರತಿ ಬೆಳಗಿ ಜಯಘೋಷಗಳೊಂದಿಗೆ ಮೂರ್ತಿಗಳನ್ನು ವಿಸರ್ಜಿಸಿದರು. ಆಯಾ ಬಡಾವಣೆಯ ಜನ ಕೂಡ ಕುಟುಂಬ ಸಮೇತರಾಗಿ ಬಂದು ಗಣಪನನ್ನು ಬೀಳ್ಕೊಟ್ಟರು. ಕಾಲುವೆ ಬಳಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇದರೊಂದಿಗೆ ಮೂರು ದಿನಗಳ ಗಣೇಶ ಉತ್ಸವಕ್ಕೆ ತೆರೆ ಬಿತ್ತು.

ADVERTISEMENT

ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಗಣೇಶ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಾಗಿ ಜನ ಸೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಅನುಮತಿ ಇರಲಿಲ್ಲ. ಆದರೆ, ಹೋದ ವರ್ಷ ಗಣೇಶ ಉತ್ಸವ ಆಚರಿಸಲಾಗದೆ ನಿರಾಸೆ ಅನುಭವಿಸಿದ್ದ ಗಣೇಶ ಮಂಡಳಿಯವರು ಈ ಸಲ ಸರ್ಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿ, ಕೋವಿಡ್‌ ಮಾರ್ಗಸೂಚಿಯಂತೆ ಉತ್ಸವ ಆಚರಿಸಿದ್ದು ವಿಶೇಷವಾಗಿತ್ತು.

ಗಣೇಶ ಚತುರ್ಥಿಯ ಮೊದಲ ದಿನ 55 ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಭಾನುವಾರ ಈ ಸಂಖ್ಯೆ ಮೂರು ಪಟ್ಟು ಹೆಚ್ಚಿತ್ತು. ಗಣೇಶನ ಮೂರ್ತಿಗಳ ವಿಸರ್ಜನೆಗೆ ನಗರದ ರೈಲು ನಿಲ್ದಾಣ ಸಮೀಪದ ತುಂಗಭದ್ರಾ ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ), ಹರಿಹರ ಹಾಗೂ ಸಂಡೂರು ರಸ್ತೆಯ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯಲ್ಲಿ (ಎಚ್‌ಎಲ್‌ಸಿ) ವ್ಯವಸ್ಥೆ ಮಾಡಲಾಗಿತ್ತು.

ಕಾಲುವೆಯ ಮೇಲ್ಸೇತುವೆ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಹೆಚ್ಚಿನ ಬೆಳಕಿಗಾಗಿ ಇಡೀ ಪರಿಸರದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿತ್ತು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಲಾವಣ್ಯ, ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ ಅವರು ತಡರಾತ್ರಿ ವರೆಗೆ ಎಲ್ಲ ಕಡೆ ಗಸ್ತು ತಿರುಗಿ, ಕಾಲುವೆಗಳ ಬಳಿ ಯಾವುದೇ ಗೊಂದಲವಿಲ್ಲದೆ ಗಣೇಶನ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.