ADVERTISEMENT

ಹೊಸಪೇಟೆ | ಪ್ರತಿದಿನ 5ರಿಂದ 6 ಆಸ್ತಿ ನೋಂದಣಿಗಳಾದರೆ ಹೆಚ್ಚು: ಆದಾಯ ಖೋತಾ

ಆಸ್ತಿ ನೋಂದಣಿಗೂ ಕರ್ಫ್ಯೂ ಕರಿನೆರಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಮೇ 2021, 19:30 IST
Last Updated 7 ಮೇ 2021, 19:30 IST
ಹೊಸಪೇಟೆಯ ಉಪ ನೋಂದಣಾಧಿಕಾರಿ ಕಚೇರಿ ಎದುರು ಗುರುವಾರ ಜನರೇ ಇರಲಿಲ್ಲ
ಹೊಸಪೇಟೆಯ ಉಪ ನೋಂದಣಾಧಿಕಾರಿ ಕಚೇರಿ ಎದುರು ಗುರುವಾರ ಜನರೇ ಇರಲಿಲ್ಲ   

ಹೊಸಪೇಟೆ (ವಿಜಯನಗರ): ಆಸ್ತಿ ನೋಂದಣಿ ಪ್ರಕ್ರಿಯೆ ಮೇಲೂ ಕೋವಿಡ್‌ ಕರ್ಫ್ಯೂ ಕರಿನೆರಳು ಬಿದ್ದಿದೆ.

ಸದ್ಯ ಪ್ರತಿದಿನ 5ರಿಂದ 6 ಜನ ಆಸ್ತಿ ನೋಂದಣಿ ಮಾಡಿಸಿಕೊಂಡರೆ ಹೆಚ್ಚು ಎಂಬಂತಾಗಿದೆ. ಇದೇನಿದ್ದರೂ ನಗರವಾಸಿಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಪ್ರದೇಶದ ಜನ ಕಚೇರಿ ಕಡೆಗೆ ಸುಳಿದಾಡುತ್ತಿಲ್ಲ.

ಸಾಮಾನ್ಯ ದಿನಗಳಲ್ಲಿ 35ರಿಂದ 40 ಜನರ ಆಸ್ತಿ ನೋಂದಣಿಯಾಗುತ್ತವೆ. ವರ್ಷಕ್ಕೆ ಸರಾಸರಿ ₹21 ಕೋಟಿ ಆದಾಯ ಬರುತ್ತದೆ. ಆದರೆ, ಈಗ ಆ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿರುವುದರಿಂದ ಸಹಜವಾಗಿಯೇ ಆದಾಯದಲ್ಲಿ ಖೋತಾ ಆಗಿದೆ.

ADVERTISEMENT

ಹೋದ ವರ್ಷ ಏಪ್ರಿಲ್‌, ಮೇನಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದಾಗ ₹20 ಲಕ್ಷ ಆಸುಪಾಸಿನಲ್ಲಿ ಆದಾಯ ಖೋತಾ ಆಗಿತ್ತು. ಪ್ರಸಕ್ತ ಸಾಲಿನಲ್ಲಿ ಸದ್ಯ ಎರಡು ವಾರ ಕರ್ಫ್ಯೂ ಘೋಷಿಸಿದ್ದರೂ ನೋಂದಣಿ ಪ್ರಕ್ರಿಯೆಗೆ ವಿನಾಯಿತಿ ನೀಡಲಾಗಿದೆ. ಹೀಗಿದ್ದರೂ ಜನ ಉಪ ನೋಂದಣಾಧಿಕಾರಿ ಕಚೇರಿಯತ್ತ ಸುಳಿಯುತ್ತಿಲ್ಲ.

ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಸದ್ಯ ಕಚೇರಿಯ ಕಿಟಕಿಯಿಂದಲೇ ದಾಖಲೆಗಳನ್ನು ಪಡೆಯಲಾಗುತ್ತಿದೆ. ಹೊರಭಾಗದಿಂದಲೇ ಬಯೋಮೆಟ್ರಿಕ್‌, ಚಿತ್ರ ಪಡೆಯಲಾಗುತ್ತಿದೆ. ಎಲ್ಲ ಸಿಬ್ಬಂದಿ ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಇತ್ತೀಚೆಗೆ ಉಪ ನೋಂದಣಾಧಿಕಾರಿ ಪ್ರಭಾಕರ ಮಠದ್‌ ಹಾಗೂ ಕಚೇರಿಯ ಆಪರೇಟರ್‌ಗೆ ಸೋಂಕು ದೃಢಪಟ್ಟಿದೆ. ಇನ್ನುಳಿದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಿತ್ಯ ಕಚೇರಿಯನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಇದು ಸಹಜವಾಗಿಯೇ ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದ್ದು, ನೋಂದಣಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಕುಸಿತ ಕಾಣಲು ಕಾರಣವಾಗಿದೆ.

‘ಮೂರು ತಿಂಗಳ ಹಿಂದೆಯೇ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕರಾರು ಆಗಿದೆ. ಇನ್ನೇನಿದ್ದರೂ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಯ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಇಷ್ಟರಲ್ಲೇ ಅಲ್ಲಿನ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿರುವ ವಿಚಾರ ಗೊತ್ತಾಯಿತು. ಸದ್ಯ ಎಲ್ಲ ಸಹಜ ಸ್ಥಿತಿಗೆ ಬರುವವರೆಗೆ ಆಸ್ತಿ ನೋಂದಣಿ ಮಾಡಿಸಿಕೊಳ್ಳದಿರಲು ನಿರ್ಧರಿಸಿರುವೆ’ ಎಂದು ಸ್ಥಳೀಯ ನಿವಾಸಿ ವೀರಭದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಕಮಲಾಪುರದ ನಿವಾಸಿ. ಹೊಸಪೇಟೆಯಲ್ಲಿ ನಿವೇಶನ ಖರೀದಿಸಿರುವೆ. ನೋಂದಣಿ ಮಾಡಿಸಿಕೊಳ್ಳುವುದಷ್ಟೇ ಕೆಲಸ ಇದೆ. ಆದರೆ, ಕರ್ಫ್ಯೂ ಇರುವುದರಿಂದ ಹತ್ತು ಗಂಟೆಯ ನಂತರ ಹೊರಗೆ ಓಡಾಡುವಂತಿಲ್ಲ. ಬೇಸಿಗೆಯಲ್ಲಿ ಸದ್ಯ ಕಚೇರಿಯ ಸಮಯ ಬದಲಿಸಿದ್ದಾರೆ. ಆದರೆ, ಕಮಲಾಪುರದಿಂದ ಹೊಸಪೇಟೆಗೆ ಬಂದು, ಎಲ್ಲ ಕೆಲಸ ಮುಗಿಸಿಕೊಂಡು ಆ ಸಮಯದೊಳಗೆ ಹಿಂತಿರುಗಿ ಹೋಗಲು ಸಾಧ್ಯವಾಗುವುದಿಲ್ಲ. ಸದ್ಯ ಆಸ್ತಿ ನೋಂದಣಿ ಮಾಡಿಸಿಕೊಳ್ಳುವ ಯೋಚನೆ ಕೈಬಿಟ್ಟಿದ್ದೇನೆ. ಕರ್ಫ್ಯೂ ಮುಗಿದ ನಂತರ ಕೆಲಸ ಮಾಡಿಕೊಳ್ಳುವೆ’ ಎಂದು ಸೈಯದ್‌ ಅಹಮ್ಮದ್ ಎಂಬುವರು ಪ್ರತಿಕ್ರಿಯಿಸಿದರು.

ಉಪ ನೋಂದಣಾಧಿಕಾರಿ ಪ್ರಭಾಕರ ಮಠದ್‌ ಪ್ರತಿಕ್ರಿಯಿಸಿ, ‘ಕೋವಿಡ್‌ ಇರುವುದರಿಂದ ಜನದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಟೋಕನ್ ಪದ್ಧತಿ ಜಾರಿಗೆ ತರಲಾಗಿದೆ. ದಿನಕ್ಕೆ 15ರಿಂದ 20 ಆಸ್ತಿ ನೋಂದಣಿ ಮಾಡಲಾಗುತ್ತಿದೆ. ಜನ ಕೂಡ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತಾತ್ಕಾಲಿಕವಾಗಿ ನೋಂದಣಿಗೆ ಹಿನ್ನಡೆ ಉಂಟಾಗಿರಬಹುದು. ಆದರೆ, ಒಂದಿಲ್ಲ ಒಂದು ದಿನ ಜನ ಆಸ್ತಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.