ADVERTISEMENT

ಮೈಸೂರು ಅತ್ಯಾಚಾರ ಘಟನೆಗೆ ಖಂಡನೆ; ಎಸ್‌ಎಫ್ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 10:18 IST
Last Updated 1 ಸೆಪ್ಟೆಂಬರ್ 2021, 10:18 IST
ಮೈಸೂರು ಅತ್ಯಾಚಾರ ಘಟನೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು
ಮೈಸೂರು ಅತ್ಯಾಚಾರ ಘಟನೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಕಟುವಾಗಿ ಖಂಡಿಸಿರುವ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್ಐ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಿಜಯನಗರ ಕಾಲೇಜಿನ ಎದುರು ಸೇರಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅತ್ಯಾಚಾರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹಕ್ಕೊತ್ತಾಯ ಮಾಡಿದರು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಯುವತಿಯರ ಮೇಲೆ ಅತ್ಯಾಚಾರ ಹೆಚ್ಚಾಗಿ ನಡೆಯುತ್ತಿವೆ. ನಿಜಕ್ಕೂ ಇದು ಕಳವಳಕಾರಿ ವಿಷಯ. ಸರ್ಕಾರ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ADVERTISEMENT

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಚ್‌.ಎಂ. ಮಾರುತಿ, ಉಪಾಧ್ಯಕ್ಷ ಕೆ.ಎ. ಪವನಕುಮಾರ್‌, ತಾಲ್ಲೂಕು ಅಧ್ಯಕ್ಷ ಜೆ. ಶಿವುಕುಮಾರ, ವಿದ್ಯಾರ್ಥಿಗಳಾದ ಜಯಾ, ಟಿ. ಸಿತಾರಾ, ಕಾವ್ಯಾಂಜಲಿ, ಪಿಯೂಷಾ, ಎ. ಉಷಾ, ಪಿ.ಎಚ್‌. ಸುನೀಲ್‌, ಸುಧಾಕರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.